ಸಮಗ್ರ ನ್ಯೂಸ್: ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಬರೆ ಹಾಕಿದ್ದು, ಪ್ರಧಾನಮಂತ್ರಿ ಉಜ್ವಲಾ ಸೇರಿದಂತೆ ಗೃಹಬಳಕೆಯ ಸಿಲಿಂಡರ್ ದರದಲ್ಲಿ 50 ರೂಪಾಯಿ ಏರಿಕೆ ಮಾಡಿದೆ. ಈ ಕುರಿತಾಗಿ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪೂರಿ ತಿಳಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಈ ಬೆಲೆ ಏರಿಕೆ ಜಾರಿಯಾಗಲಿದೆ.
“14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಾಗಲಿದೆ. 500 ರಿಂದ 550 ರೂ.ಗಳಿಗೆ (ಉಜ್ವಲಾ ಫಲಾನುಭವಿಗಳಿಗೆ) ಮತ್ತು ಇತರರಿಗೆ ಇದು 803 ರೂ.ಗಳಿಂದ 853 ರೂ.ಗಳಿಗೆ ಏರಿಕೆಯಾಗಲಿದೆ” ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಈ ಪರಿಷ್ಕರಣೆಯು ಸಾಮಾನ್ಯವಾಗಿ ಪ್ರತಿ 2-3 ವಾರಗಳಿಗೊಮ್ಮೆ ಆವರ್ತಕ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಅವರು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಇತ್ತೀಚಿನ ಅಬಕಾರಿ ಸುಂಕ ಹೆಚ್ಚಳವು ಗ್ರಾಹಕರಿಗೆ ಹೊರೆಯಾಗೋದಿಲ್ಲ. ಆದರೆ, ಸಬ್ಸಿಡಿ ಅನಿಲ ಬೆಲೆಗಳಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ಅನುಭವಿಸಿದ 43,000 ಕೋಟಿ ರೂ. ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದ್ದಾರೆ.