ಸಮಗ್ರ ನ್ಯೂಸ್: ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು, ಆಕೆಯ ಪೈಜಾಮಾದ ದಾರವನ್ನು ಹಿಡಿದು ಎಳೆಯುವುದಷ್ಟೇ ಅತ್ಯಾಚಾರ ಆಗುವುದಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಿತ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು (ಬುಧವಾರ) ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ನೇತೃತ್ವದ ಪೀಠವು ಈ ಕುರಿತು ಪ್ರತಿಕ್ರಿಯಿಸಿದ್ದು, ‘ಇದು ಗಂಭೀರ ವಿಷಯವಾಗಿದೆ. ಇಂತಹ ಆದೇಶಗಳು ಸಂವೇದನಾರಹಿತ, ಅಮಾನವೀಯ ವಿಧಾನವನ್ನು ಪ್ರತಿನಿಧಿಸುತ್ತವೆ’ ಎಂದು ಹೇಳಿದೆ.
ಈ ಪ್ರಕರಣ ಕುರಿತಂತೆ ಆದೇಶ ಹೊರಡಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಸೂಕ್ಷ್ಮತೆ ಕೊರತೆಯನ್ನು ನೋಡಿ ನೋವಾಗಿದೆ ಎಂದು ಸುಪ್ರೀಂ ಕೋರ್ಟ್ ಬೇಸರ ಹೊರಹಾಕಿದೆ.
ಅಲಹಾಬಾದ್ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾದ ವಿವಾದಾತ್ಮಕ ಅಭಿಪ್ರಾಯಗಳ ಕುರಿತಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.