ಬ್ರಹ್ಮಾವರ: ಉಪ್ಪಿನಕೋಟೆಯ ಕುಮ್ರಗೋಡು ಎಂಬಲ್ಲಿ ಫ್ಲ್ಯಾಟ್ ನಲ್ಲಿ ವಿಶಾಲಾ ಗಾಣಿಗ ಕೊಲೆಯಾಗಿ ಒಂದೂವರೆ ತಿಂಗಳು ಕಳೆದಿದೆ. ಕೊಲೆಯಾದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಶಾಲಾಳ ಪತಿ ಸಮೇತ ಇಬ್ಬರನ್ನು ಬಂಧಿಸಲಾಯಿತು. ಇದೀಗ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ಮೂರನೇ ವ್ಯಕ್ತಿ ಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ಬಯಲಿಗೆಳೆಯಲು ಸಾಕಷ್ಟು ಶ್ರಮ ಪಟ್ಟಿದ್ದ ಪೊಲೀಸರು, ನೇಪಾಳ ಗಡಿಯ ಸಮೀಪದಿಂದ ಸ್ವಾಮಿಂತ್ ನಿಶಾದ್ ಎಂಬಾತನನ್ನು ಬಂಧಿಸಿದ್ದರು. ವಿಶಾಲಾಳ ಪತಿ ರಾಮಕೃಷ್ಣ ಗಾಣಿಗ ತನ್ನ ಪತ್ನಿಯ ಮೇಲೆ ತುಂಬಾ ಪ್ರೀತಿಯಿರುವಂತೆ ವರ್ತಿಸುತ್ತಿದ್ದರೂ ಆತನ ಕೈವಾಡವನ್ನು ಬಯಲಿಗೆಳೆದು ಜೈಲು ಕಂಬಿ ಹಿಂದೆ ಹಾಕುವಲ್ಲಿ ಸಫಲರಾಗಿದ್ದರು ಪೊಲೀಸರು.
ಹತ್ಯೆಗೆ ಸಾಥ್ ಕೊಟ್ಟ ಇನ್ನೊಬ್ಬಆರೋಪಿ ಮುಂಬೈ ನಿವಾಸಿ ಎಂದು ಹೇಳಲಾಗುತ್ತಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಇಲ್ಲಿಂದ ಪೊಲೀಸರು ಮುಂಬೈ ತಲುಪುವ ವೇಳೆಗೆ ಆತ ಅಲ್ಲಿಂದ ಪರಾರಿಯಾಗಿದ್ದ. ಸ್ಥಳೀಯ ಪೊಲೀಸ್ ಠಾಣೆಯಿಂದ ಆತನ ಕ್ರಿಮಿನಲ್ ಪೂರ್ವಾಪರಗಳ ಬಗ್ಗೆ ಪೊಲೀಸರು ವಿವರಗಳನ್ನು ಸಂಗ್ರಹಿಸಿ ಆತ ವಾಸಿಸುತ್ತಿದ್ದ ಮನೆಗೆ ಭೇಟಿ ನೀಡಿದ್ದರು. ಆದರೆ ಆತನ ಕುಟುಂಬ ಸದಸ್ಯರು ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಆತ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ.
ವಿಶಾಲಾ ಕೊಲೆಯ ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಆರೋಪಿಗಳು ಮುಂಬೈನಲ್ಲಿ ಮಾರಾಟ ಮಾಡಿದ್ದ ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ತಲೆಮರೆಸಿಕೊಂಡಿರುವ ಆರೋಪಿ ಬಗ್ಗೆ ಯಾವುದೇ ಸುಳಿವು ಸಿಕ್ಕರೆ ತಮ್ಮನ್ನು ಎಚ್ಚರಿಸುವಂತೆ ಉಡುಪಿ ಜಿಲ್ಲಾ ಪೋಲಿಸರು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆತನನ್ನು ಇನ್ನೂ ಪತ್ತೆ ಮಾಡದ ಕಾರಣ, ಪ್ರಕರಣದಲ್ಲಿ ಕೆಲವು ಕಗ್ಗಂಟುಗಳು ಬಗೆಹರಿಯದೆ ಉಳಿದಿವೆ.