ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬಿಂದು ಜೀರಾ ಹೆಸರನ್ನು ಕೇಳದವರೇ ಇಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಈ ಕೂಲ್ ಡ್ರಿಂಕ್ ಜನಪ್ರಿಯವಾಗಿದ್ದು, ಬೇಸಿಗೆಯಲ್ಲಿ ಹೆಚ್ಚು ಜನರು ಇಷ್ಟಪಟ್ಟು ಕುಡಿಯುತ್ತಾರೆ. ಇಂದು ‘ಬಿಂದು ಜೀರಾ’ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚು ಪ್ರಖ್ಯಾತಿ ಗಳಿಸುತ್ತಿದೆ.
ಕೂಲ್ ಡ್ರಿಂಕ್ ಉದ್ಯಮದಲ್ಲಿ ಬಿಂದು ಜೀರಾ ಬ್ರ್ಯಾಂಡ್ ಕಟ್ಟಿ ಬೆಳೆಸಿದ ಕೀರ್ತಿ ಎಸ್‌ಜಿ ಗ್ರೂಪ್ ಮಾಲೀಕ ಸತ್ಯ ಶಂಕರ್ ಅವರಿಗೆ ಸಲ್ಲುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸತ್ಯ ಶಂಕರ್ ಅವರು, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡು ಯಶಸ್ವಿ ಉದ್ಯಮಿಯಾಗಿದ್ದಾರೆ. ಸಾಮಾನ್ಯ ಆಟೋ ಚಾಲಕರಾಗಿದ್ದ ಅವರು, ಹಂತ ಹಂತವಾಗಿ ಈ ಮಟ್ಟಕ್ಕೆ ಬೆಳೆದಿದ್ದು, ವಾರ್ಷಿಕ 800 ಕೋಟಿ ವಹಿವಾಟು ನಡೆಸುವ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಸದ್ಯ, ಆಂಧ್ರ ಪದೇಶದ ವಿಶಾಖಪಟ್ಟಣದಲ್ಲಿ ನೂತನ ‘ಬಿಂದು ಜೀರಾ’ ತಯಾರಕ ಘಟಕವನ್ನು ತೆರೆಯಲು ಕೂಡ ಅಣಿಯಾಗಿದ್ದಾರೆ.
ಇತ್ತೀಚೆಗೆ ಸತ್ಯ ಶಂಕರ್ ಅವರು, ದುಬಾರಿ ಬೆಲೆಯ ಹೊಚ್ಚ ಹೊಸ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಸತ್ಯ ಶಂಕರ್ ಅವರು ಪತ್ನಿಯೊಂದಿಗೆ ನೂತನ ಕಾರನ್ನು ವಿತರಣೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ರೋಲ್ಸ್ ರಾಯ್ಸ್ ಫ್ಯಾಂಟಮ್ ವಿಶೇಷತೆಗಳೇನು: ಈ ಕಾರು ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ ಸರಿ ಸುಮಾರು ರೂ.8.99 ಕೋಟಿಯಿಂದ ರೂ.10.48 ಕೋಟಿ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಇದರ ಹೊರತಾಗಿ ಗ್ರಾಹಕರಿಗೆ ರೂ.11 ಕೋಟಿಯಿಂದ ರೂ.12 ಕೋಟಿ ಆನ್-ರೋಡ್ ದರದಲ್ಲಿ ಸಿಗುತ್ತದೆ.
ಈ ಕಾರು ಶಕ್ತಿಯುತವಾದ 6.75-ಲೀಟರ್ ಟ್ವಿನ್ ಟರ್ಬೊ ವಿ12 ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 570 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 900 ಎನ್‌ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 9.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ನೂತನ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ದೂರದ ಊರುಗಳಿಗೆ ಸಂಚಾರ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 494 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ದೊಡ್ಡದಾದ ಇನ್ಫೋಟೈನ್‌ಮೆಂಟ್ ಯುನಿಟ್, ಫ್ರಂಟ್ ಮಸಾಜ್ & ವೆಂಟಿಲೇಟೆಡ್ ಸೀಟ್‌ಗಳು ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 8 ಏರ್‌ಬ್ಯಾಗ್‌ಗಳು, ಹೈ-ಬೀಮ್ ಅಸಿಸ್ಟ್, ಸೀಟ್ ಬೆಲ್ಟ್ ಅಲರ್ಟ್, ಚೈಲ್ಡ್ ಲಾಕ್, ಓವರ್‌ಸ್ಪೀಡ್ ಅಲರ್ಟ್ ಹಾಗೂ ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಅನ್ನು ಒಳಗೊಂಡಿದೆ.
Courtesy: Drivespark Kannada