ಸೌಜನ್ಯ ‌ಅತ್ಯಾಚಾರ ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಆಗ್ರಹಿಸಿ ‘ಧರ್ಮಸ್ಥಳ ಚಲೋ’ಗೆ ನಿರ್ಣಯ

ಸಮಗ್ರ ನ್ಯೂಸ್: ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹಾಗೂ ತಪ್ಪಿತಸ್ಥರ ಶಿಕ್ಷೆಗೆ ಆಗ್ರಹಿಸಿ ಧರ್ಮಸ್ಥಳ ಚಲೊ ನಡೆಸಬೇಕು ಎಂಬ ನಿರ್ಣಯವನ್ನು ಸಮಾನ ಮನಸ್ಕರ ಸಭೆ ಕೈಗೊಂಡಿದೆ.

Ad Widget .

ಈ ಪ್ರಕರಣದಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಚಿಂತಕರು, ರಂಗಕರ್ಮಿಗಳು ಹಾಗೂ ಹೋರಾಟಗಾರರು ಭಾಗವಹಿಸಿದ್ದರು.

Ad Widget . Ad Widget .

ಪ್ರಕರಣದ ಬಗ್ಗೆ ಚರ್ಚಿಸಿದ ಅವರು, ‘ಪಾದಯಾತ್ರೆ ಅಥವಾ ಬೈಕ್ ರ್‍ಯಾಲಿ ನಡೆಸಬೇಕು. ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶವನ್ನೂ ಆಯೋಜಿಸಬೇಕು. ಅದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಬೇಕು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಅಂತಿಮವಾಗಿ, ‘ಧರ್ಮಸ್ಥಳ ಚಲೊ ಹೆಸರಿನಲ್ಲಿ ಒಂದು ಜಾಥಾವನ್ನು ನಡೆಸಬೇಕು. ಅದರ ಸ್ವರೂಪ‍ ಯಾವ ರೀತಿ ಇರಬೇಕು? ಎಲ್ಲಿಂದ ಪ್ರಾರಂಭಿಸಬೇಕು? ಜಿಲ್ಲೆಗಳಲ್ಲಿ ಯಾವ ರೀತಿ ಸಭೆ ನಡೆಸಬೇಕು ? ಸಮಾವೇಶವನ್ನು ಎಲ್ಲಿ ಮಾಡಬೇಕು ಸೇರಿ ವಿವಿಧ ಸಂಗತಿಗಳ ಬಗ್ಗೆ ಚರ್ಚಿಸಿ, ರೂಪುರೇಷೆ ಸಿದ್ಧಪಡಿಸಲು ವಿವಿಧ ಸಂಘಟನೆಗಳ ಮುಖ್ಯಸ್ಥರ ಜತೆಗೆ ಇನ್ನೊಂದು ಸಭೆ ನಡೆಸಬೇಕು’ ಎಂದು ಈ ಸಭೆಯಲ್ಲಿ ನಿರ್ಧರಿಸಲಾಯಿತು.

ಚಿಂತಕ ಸಿದ್ದನಗೌಡ ಪಾಟೀಲ, ‘ಧರ್ಮ, ದೇವರು ಹಾಗೂ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ನಡೆಸಲಾಗುತ್ತಿರುವ ಅಪರಾಧದ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಕರಣ ಹಾಗೂ ನಡೆದು ಬಂದ ಹಾದಿಯ ಬಗ್ಗೆ ಕಿರು ಹೊತ್ತಿಗೆಯನ್ನು ಹೊರತರಬೇಕು. ಇದನ್ನು ಎಲ್ಲೆಡೆ ವಿತರಿಸುವ ಮೂಲಕ ಜನಾಂದೋಲನ ರೂಪಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೇವಿ, ‘ಸರ್ಕಾರವು ಅತ್ಯಾಚಾರಿಗಳು, ಕೊಲೆಗಡುಕರನ್ನು ಬೆಂಬಲಿಸುತ್ತಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಮೊದಲು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು. ಬಳಿಕ ರಾಜ್ಯಮಟ್ಟದ ಸಮಾವೇಶ ಅಗತ್ಯ’ ಎಂದರು.

ರಂಗಕರ್ಮಿ ರಘುನಂದನ್, ‘ಈ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲ ನೀಡುವಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆಯಬೇಕು. ವಿವಿಧ ಕಾರ್ಯಕ್ರಮಗಳಲ್ಲಿಯೂ ಭಿತ್ತಿಪತ್ರ ವಿತರಣೆಯಂತಹ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಸ್ಟಾಫ್‌ ಆಯಂಡ್‌ ವರ್ಕರ್ಸ್‌ ಫೆಡರೇಶನ್‌ ಅಧ್ಯಕ್ಷ ಅನಂತ ಸುಬ್ಬರಾವ್, ಶಿವಸುಂದರ್, ನರಸಿಂಹಮೂರ್ತಿ, ಸಂಘಟಕರಾದ ಹರೀಶ್‌ ಬೈರಪ್ಪ, ವಕೀಲರಾದ ವಿನಯ್‌ ಶ್ರೀನಿವಾಸ್‌, ಮೈತ್ರೇಯಿ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *