ಸಮಗ್ರ ನ್ಯೂಸ್: ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಒಂಬತ್ತು ತಿಂಗಳ ಬಳಿಕ ಭೂಮಿಗೆ ಮರಳಲಿದ್ದು, ಇಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ.
ತಾಂತ್ರಿಕ ಅಡಚಣೆಗಳಿಂದಾಗಿ ಸುಮಾರು ಒಂಬತ್ತು ತಿಂಗಳುಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿರುವ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದ್ದು, ಇಂದು ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ.
ಸ್ಪೇಸ್ ಎಕ್ಸ್ ಕ್ರೂ – 10 ಮಿಷನ್ ಈಗಾಗಲೇ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಸುನಿತಾ, ಬುಚ್ ಹಾಗೂ ಇತರ ಗಗನಯಾತ್ರಿಗಳನ್ನು ಹೊತ್ತು ನೌಕೆಯು ಫ್ಲಾರಿಡಾ ಕಡಲತೀರಕ್ಕೆ ಬಂದಿಳಿಯಲಿದೆ. ಸುದೀರ್ಘ 17 ಗಂಟೆಗಳ ಪ್ರಯಾಣದ ನಂತರ ಮಾರ್ಚ್ 19ಕ್ಕೆ ಸುನೀತಾ ಭೂಮಿಯನ್ನು ತಲುಪಲಿದ್ದಾರೆ.
ಇನ್ನು ಸುನೀತಾ ಹಾಗೂ ಬುಚ್ ಭೂಮಿಗೆ ಬಂದಿಳಿಯುತ್ತಿದ್ದಂತೆ, ಆಸ್ಪತ್ರೆಗೆ ಕರೆದೊಯ್ಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ತಿಂಗಳಾನುಗಟ್ಟಲೆ ಗುರುತ್ವಾಕರ್ಷಣೆಯಿಂದ ಹೊರಗಿದ್ದ ಕಾರಣ ಅವರ ಪಾದಗಳು ತೀರಾ ಮೃದುವಾಗಿರುತ್ತವೆ. ಬರಿ ಪಾದದಲ್ಲಿ ಅವರು ತಮ್ಮ ಮನೆಯಲ್ಲೂ ಕೆಲವು ದಿಗನಳ ಕಾಲ ನಡೆದಾಡುವಂತಿಲ್ಲ.
ಹೀಗಾಗಿ ಆಸ್ಪತ್ರೆಯಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಭೂಮಿಗೆ ಬರುತ್ತಿದ್ದಂತೆ ರಕ್ತದೊತ್ತಡ ಹಾಗೂ ನಾನಾ ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಲ್ಲವನ್ನೂ ನೋಡಿಕೊಂಡು ಚಿಕಿತ್ಸೆ ನೀಡಿ ಮೊದಲಿನಂತೆ ಆದಮೇಲೆಯೇ ಮನೆಗೆ ಕಳುಹಿಸಲಾಗುವುದು.