ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ವೈ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ನೀಡಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ವಿಶೇಷ ನ್ಯಾಯಾಲಯದ ಸಮನ್ಸ್ ಹಾಗೂ ಕೋರ್ಟ್ ಕಾಗ್ನಿಜೆನ್ಸ್ ರದ್ದು ಮಾಡುವಂತೆ ಕೋರಿ ಬಿಎಸ್‍ವೈ ಮತ್ತು ಇತರ ಮೂವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಸಮನ್ಸ್ ಆದೇಶಕ್ಕೆ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗೆ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಈ ಮೂಲಕ ಮಾ.15ರಂದು ಅವರು ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗೆ ಖುದ್ದು ಹಾಜರಾಗುವುದರಿಂದ ಬಚಾವ್ ಆಗಿದ್ದಾರೆ. ಶನಿವಾರ ಖುದ್ದು ವಿಚಾರಣೆ ಹಾಜರಾಗುವಂತೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
ಬಿಎಸ್‍ವೈ ಅರ್ಜಿಯ ವಿವರವಾದ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ಈ ಹಿಂದೆ ಹೈಕೋರ್ಟ್ ಮೆರಿಟ್ಸ್ ಆಧಾರದಲ್ಲಿ ತೀರ್ಮಾನಿಸಿರಲಿಲ್ಲ. ವಿಚಾರಣೆ ವೇಳೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿತ್ತು. ಖುದ್ದು ಹಾಜರಾತಿಯಿಂದಲೂ ಹೈಕೋರ್ಟ್ ವಿನಾಯಿತಿ ನೀಡಿತ್ತು.