ಸಮಗ್ರ ನ್ಯೂಸ್: ಕೊಲೆ ಉದ್ದೇಶದಿಂದ ಬೈಕ್ ಸವಾರನಿಗೆ ಹಾಗೂ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಉರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾರನ್ನು ಹಾಗೂ ಅದನ್ನು ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಬಿಎಸ್‌ಎನ್‌ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿ ಸತೀಶ್ ಕುಮಾರ್.ಕೆ.ಎಂ ಕಾರು ಚಲಾಯಿಸಿದ್ದ ಆರೋಪಿ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗುರುವಾರ ಬೆಳಿಗ್ಗೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯ ರಸ್ತೆಯಲ್ಲಿ ನಾನು ಬೈಕ್‌ನಲ್ಲಿ ಸಾಗುತ್ತಿದ್ದೆ. ಆಗ ನಮ್ಮ ಎದುರು ಮನೆಯ ನಿವಾಸಿ ಸತೀಶ್ ಕುಮಾರ್ ಕೊಲೆಮಾಡುವ ಉದ್ದೇಶದಿಂದ ತಮ್ಮ ಮಾರುತಿ 800 ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ನನ್ನ ಬೈಕಿಗೆ ಡಿಕ್ಕಿ ಹೊಡೆಸಿದ್ದ. ಬಳಿಕ ಆ ಕಾರು ಪಾದಚಾರಿ ಮಹಿಳೆಗೂ ಡಿಕ್ಕಿ ಹೊಡೆದಿದೆ ಎಂದು ಕಾಪಿಕಾಡ್‌ನ ಮುರಳಿ ಪ್ರಸಾದ್ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿ ಸತೀಶ್ ಕುಮಾರ್ ನಮ್ಮ ಜೊತೆ ಮೊದಲಿನಿಂದಲೂ ಜಗಳವಾಡಿಕೊಂಡಿದ್ದ. ಅನೇಕ ಸಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿಂದೊಮ್ಮೆ ನನ್ನ ತಂದೆಯವರು ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಬೈಕ್ ತಾಗಿಸಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಈ ಬಗ್ಗೆ ಉರ್ವ ಠಾಣೆಯಲ್ಲಿ 2023ರಲ್ಲಿ ದೂರು ದಾಖಲಾಗಿತ್ತು ಎಂದೂ ಮುರಳಿ ಪ್ರಸಾದ್ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ದಾಖಲು: ಮಾರುತಿ 800 ಕಾರು ಬೈಕಿಗೆ ಹಾಗೂ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಎಸೆಲ್ಪಟ್ಟ ಮಹಿಳೆ ಕೆಲ ಹೊತ್ತು ರಸ್ತೆ ಪಕ್ಕದ ಕಾಂಪೌಂಡ್‌ನ ಗ್ರಿಲ್‌ನಲ್ಲಿ ನೇತಾಡುತ್ತಿದ್ದರು. ಸ್ಥಳೀಯರು ಆಕೆಯನ್ನು ಕೆಳಗಿಳಿಸಿ ಉಪಚರಿಸಿದ್ದರು.
‘ಮುರಳಿಪ್ರಸಾದ್ ಹಾಗೂ ಮಹಿಳೆ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳೆದ್ವೇಷದಿಂದ ಕೊಲೆಮಾಡುವ ಉದ್ದೇಶದಿಂದ ಕಾರನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುರಳಿ ಪ್ರಸಾದ್ ಅವರಿಗೆ ಡಿಕ್ಕಿ ಹೊಡೆಸಿದ ಬಗ್ಗೆ ಉರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆಸಿದ ಕುರಿತು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.