ಸುಳ್ಯ: ರಾತ್ರಿ ಬಸ್ಸಿನಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನೊಬ್ಬ ಪ್ರಯಾಣಿಸುತ್ತಿರುವುದಾಗಿ ತಪ್ಪು ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ಬಸ್ಸನ್ನು ತಡೆದು ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾದ ನಂತರವೂ ಪೊಲೀಸರ ಮೇಲೆಯೇ ಧಮ್ಕಿ ಹಾಕಿದ ಘಟನೆ ನಿನ್ನೆ ರಾತ್ರಿ ಸುಳ್ಯದಲ್ಲಿ ನಡೆದಿದೆ.
ಪುತ್ತೂರಿನಿಂದ ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ಸಿನಲ್ಲಿ ಬೆಂಗಳೂರಿನ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದರು. ಈ ವೇಳೆ ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಮಾಡಿದ್ದ ಮುಸ್ಲಿಮ್ ಯುವಕನೋರ್ವನೂ ಪ್ರಯಾಣಿಸುತ್ತಿದ್ದ. ಬಸ್ ಕುಂಬ್ರ ತಲುಪುತ್ತಿದ್ದಂತೆ ಬೆಂಗಳೂರಿನಿಂದ ಬೇರೆ ಕೆಲಸದ ಕರೆ ಬಂದ ಕಾರಣ ಆತ ಅದೇ ಬಸ್ಸಿನಲ್ಲಿ ಬೆಂಗಳೂರಿಗೆ ಟಿಕೆಟ್ ಖರೀದಿಸಿ ಪ್ರಯಾಣ ಮುಂದುವರೆಸಿದ್ದ.
ಇದನ್ನು ಹಿಂದೂ ಯುವತಿರೊಂದಿಗೆ ಪ್ರಯಾಣಿಸುವುದಕ್ಕಾಗಿಯೇ ಮುಸ್ಲಿಂ ಯುವಕ ಬೆಂಗಳೂರಿಗೆ ಟಿಕೆಟ್ ಖರೀದಿಸಿದ್ದಾನೆ ಎಂದು ಪುತ್ತೂರಿನ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಬಸ್ಸಿನಲ್ಲಿರುವ ಒಬ್ಬಾತ ಮಾಹಿತಿ ರವಾನಿಸಿದ್ದ ಎನ್ನಲಾಗಿದೆ. ತಪ್ಪು ಮಾಹಿತಿ ಪಡೆದ ಕಾರ್ಯಕರ್ತರು ತಮ್ಮ ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಿ ಆನೆಗುಂಡಿಯಲ್ಲಿ ಬಸ್ಸನ್ನು ಅಡ್ಡಗಟ್ಟಿದ್ದಾರೆ. ಬಸ್ಸಿನೊಳಗೆ ನುಗ್ಗಿ ಯುವಕನನ್ನು ಹಿಡಿದು ಮೊಬೈಲ್ ಕಸಿದು ಗದರಿಸಿದ್ದಾರೆ. ಆದರೆ ಇದಾವುದರ ಅರಿವೇ ಇಲ್ಲದೆ ಯುವಕ, ಯುವತಿಯರು, ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ಆತಂಕಿತರಾಗಿದ್ದಾರೆ. ಹಿಂಜಾವೇ ಕಾರ್ಯಕರ್ತರ ರಂಪಾಟ ಕಂಡು ಬಸ್ ನಲ್ಲಿದ್ದ ನಾಗರಿಕರೊಬ್ಬರು ಇಲ್ಲಿ ಗಲಾಟೆ ಮಾಡುವ ಬದಲು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಇದಾದ ಬಳಿಕ ತಮ್ಮ ಕಾರಿನಲ್ಲಿ ಬಸ್ಸನ್ನು ಕಾರ್ಯಕರ್ತರು ಹಿಂಬಾಲಿಸಿದ್ದಾರೆ. ಆದರೆ ಕುಂಬ್ರ ದಿಂದ ಮತ್ತೆ ಬೆಂಗಳೂರಿಗೆ ಹೊರಟ ಯುವಕ ಪೈಚಾರಿನಲ್ಲಿ ಬಸ್ಸಿನಿಂದ ಇಳಿದು ತನ್ನ ಸ್ವಜಾತಿ ಬಾಂಧವರಿಗೆ ವಿಷಯ ತಿಳಿಸಿದ್ದಾನೆ. ಕೆಲವೇ ಸಮಯದಲ್ಲಿ ಸ್ಥಳದಲ್ಲಿ ಜನ ದೌಡಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅದಾಗಲೇ ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಬಸ್ ಸಮೇತ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ಯುವಕ ಹಾಗೂ ಯುವತಿಯರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಮೊಬೈಲ್ ಗಳನ್ನು ಪರಿಶೀಲಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಯುವಕ, ಯುವತಿಯರೊಂದಿಗೆ ದುರುದ್ದೇಶ ಹೊತ್ತು ಪ್ರಯಾಣಿಸಿರುವ ಬಗ್ಗೆ ಬಸ್ಸಿನಲ್ಲಿ ಉಳಿದವರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಆದ್ದರಿಂದ ಪೊಲೀಸರು ಪ್ರಕರಣವನ್ನು ಮಾತುಕತೆಯಲ್ಲಿ ಇತ್ಯರ್ಥಗೊಳಿಸಿದ್ದಾರೆ. ಬಳಿಕ ಯುವತಿಯರನ್ನು ಅದೇ ಬಸ್ಸಿನಲ್ಲಿ ಬೆಂಗಳೂರಿಗೆ ಮತ್ತು ಯುವಕನನ್ನು ನಂತರದ ಬಸ್ಸಿನಲ್ಲಿ ಕಳುಹಿಸಿದ್ದಾರೆ.
ಇದಾದ ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂದು ಠಾಣೆಯಿಂದ ಹೊರಟ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಠಾಣೆಯ ಎಎಸೈ ಶಿವರಾಮ ಎಂಬವರ ಮೇಲೆ ಅವಾಜ್ ಹಾಕಿದ್ದಾರೆ. ಇದನ್ನು ಕಂಡ ಎಸ್ ಐ ಮತ್ತು ಸಿಐ ಹಿಂಜಾವೇ ಕಾರ್ಯಕರ್ತರೊಂದಿಗೆ ಮತ್ತೆ ಮಾತುಕತೆ ನಡೆಸಿ ಕಳುಹಿಸಿದ್ದಾರೆ. ಆದರೂ ಹಿಂಜಾವೇ ಕಾರ್ಯಕರ್ತ ಅಜಿತ್ ರೈ ಹೊಸಮನೆ ಎಂಬವರು “ನೀನು ಏನು ಎಂಬುದು ನಮಗೆ ಗೊತ್ತು. ಈ ವಿಚಾರವನ್ನು ಇಲ್ಲಿಗೆ ಕೈಬಿಡುವುದಿಲ್ಲ. ನಾವು ಏನು ಎಂಬುದನ್ನು ಒಂದು ವಾರದಲ್ಲಿ ತೋರಿಸುತ್ತೇವೆ” ಎಂದು ಅವಾಚ್ಯಶಬ್ದಗಳಿಂದ ಪೊಲೀಸ್ ಅಧಿಕಾರಿಗೆ ನಿಂದಿಸಿರುವುದಾಗಿ ಹೇಳಲಾಗಿದೆ. ಹಿಂಜಾವೇ ಕಾರ್ಯಕರ್ತರ ಈ ಕೆಟ್ಟ ನಡವಳಿಕೆ, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಕೋಮು ಬೀಜ ಬಿತ್ತುವ ಹುನ್ನಾರ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.