ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ದಿಢೀರ್ ಮಳೆಯಾಗಿದೆ. ಇಂದು (ಮಾರ್ಚ್ 11) ಸಂಜೆ ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನವಾಗಿದೆ.
ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಹವಾಮಾನ ಇಲಾಖೆ ನೀಡಿದ್ದ ಮುನ್ಸೂನೆ ನಿಜವಾಗಿದ್ದು, ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ಜನ ಫುಲ್ ಖುಷ್ ಆಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ತಾಪಮಾನ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ತಾಪಮಾನ ಮತ್ತಷ್ಟು ಏರಿಕೆಯಾಗಿತ್ತು. ಆದರೆ, ಸಂಜೆ 6 ಗಂಟೆ ವೇಳೆಗೆ ಹಲವು ಏರಿಯಾಗಳಲ್ಲಿ ಏಕಾಏಕಿ ಮಳೆಯಾಗಿದೆ. ಇನ್ನು ಈ ಬೇಸಿಗೆ ಕಾಲದಲ್ಲೂ ಮಳೆಯಾಗಿರುವುದರಿಂದ ಜನರು ಅಚ್ಚರಿಯಾಗಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮಾರ್ಚ್ 11 ರಿಂದ 13 ರವರೆಗೆ ಬೆಂಗಳೂರು ನಗರ ಸೇರಿದಂತೆ 12 ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿಗಳು ಮತ್ತೆ ಮಳೆ ನಿರೀಕ್ಷೆ ಮಾಡಬಹುದು. ಹವಾಮಾನ ಇಲಾಖೆ ಹೇಳಿದರೆ ಮಳೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ, ಇದೀಗ ಮುನ್ಸೂಚನೆಯಂತೆ ಮಳೆಯಾಗಿದೆ.