ಸಮಗ್ರ ನ್ಯೂಸ್: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎನ್ನುವ ಹೆಣ್ಣು ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಈ ಮೂಲಕ ಇಲ್ಲಿನ ಹುಲಿಗಳ ಸಂಖ್ಯೆ ಹತ್ತಕ್ಕೇರಿದೆ. ಒಂದು ಗಂಡು ಹಾಗೂ ಹೆಣ್ಣು ಮರಿಗಳಾಗಿದ್ದು ಇವು ಆರೋಗ್ಯದಿಂದಿವೆ.
ಇದೇ “ರಾಣಿ ಹುಲಿ’ಯು 2016ರಲ್ಲಿ 5 ಮರಿಗಳಿಗೆ ಜನ್ಮನೀಡಿ ದಾಖಲೆ ನಿರ್ಮಿಸಿತ್ತು. 2021 ರಲ್ಲಿ 3 ಮರಿಗಳಿಗೆ ಜನ್ಮ ನೀಡಿದ್ದು, ಒಟ್ಟು ಹತ್ತು ಮಕ್ಕಳ ತಾಯಿ.
2016ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟದಿಂದ ರಾಣಿಯನ್ನು ಪಿಲಿಕುಳಕ್ಕೆ ತಂದಿದ್ದು, ಪ್ರತಿಯಾಗಿ ಇಲ್ಲಿನ ಗಂಡು ಹುಲಿಯನ್ನು ಬನ್ನೇರುಘಟ್ಟ ಮೃಗಾಲಯಕ್ಕೆ ನೀಡಲಾಗಿತ್ತು. ಪಿಲಿಕುಳದಲ್ಲಿ ಈ ಹಿಂದೆ 15 ಕ್ಕೂ ಹೆಚ್ಚು ಹುಲಿಗಳಿದ್ದವು.
ಪಿಲಿಕುಳದಲ್ಲಿ ಮೃಗಾಲಯ ಆರಂಭಿ ಸುವಾಗ ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಿಂದ ಹುಲಿಯನ್ನು ತರಲಾಗಿತ್ತು. ಆದರೆ ಈಗ ಶಿವಮೊಗ್ಗದ ಮೃಗಾಲಯದಿಂದಲೇ ಇಲ್ಲಿನ ಹುಲಿಗಳಿಗೆ ಬೇಡಿಕೆ ಇದೆ. ಹಂಪಿ ಮೃಗಾಲಯದಿಂದಲೂ ಬೇಡಿಕೆ ಇದೆ. ಮಧ್ಯಪ್ರದೇಶದಿಂದ ವಿನಿಮಯದಡಿ ಹುಲಿಯನ್ನು ತರಿಸಿಕೊಳ್ಳುವ ಯೋಜನೆ ಯೂ ಮೃಗಾಲಯದ ಮುಂದಿದೆ.