ಸಮಗ್ರ ನ್ಯೂಸ್: ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ಧೂತ ಸಮೀರ್ ಯುಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯ ಕುರಿತಾಗಿ ಮಾಡಿದ ವಿಡಿಯೊ ಸದ್ಯ ಪ್ರಕರಣದ ಕುರಿತು ಜನರಲ್ಲಿದ್ದ ಅಭಿಪ್ರಾಯಗಳನ್ನೇ ಉಲ್ಟಾ ಮಾಡಿಬಿಟ್ಟಿದೆ.
‘ಊರಿನ ದೊಡ್ಡವರೇ ಈ ಕೊಲೆ ಮಾಡಿದವರಾ?’ ಎಂಬ ಶೀರ್ಷಿಕೆಯಡಿ ವಿಡಿಯೊ ಮಾಡಿದ್ದ ಸಮೀರ್ ಸೌಜನ್ಯ ಮಾತ್ರವಲ್ಲದೇ ಮಾವುತ ನಾರಾಯಣ, ಆತನ ತಂಗಿ ಯಮುನಾ, ಶಿಕ್ಷಕಿ ವೇದವಲ್ಲಿ ಹೀಗೆ ಇನ್ನೂ ಕೆಲ ಪ್ರಕರಣಗಳ ಬಗ್ಗೆ ವಿವರಿಸಿ ಇವೆಲ್ಲದ್ದಕ್ಕೂ ಊರ ಗೌಡ್ರ ಕುಟುಂಬದ ಲಿಂಕ್ ಇತ್ತು ಎಂದು ಹೇಳಿದ್ದಾರೆ.
ಹೀಗೆ ಸಮೀರ್ ಮಾಡಿದ ವಿಡಿಯೊ ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ನಿಮಗೆ ಹೆಚ್ಚೇನೂ ಹೇಳಬೇಕಿಲ್ಲ. ಪೊಲೀಸರೇ ಕಾನೂನುಬಾಹಿರವಾಗಿ ನೋಟಿಸ್ ನೀಡುವ ಮಟ್ಟಕ್ಕೆ ಸಮೀರ್ ವಿಡಿಯೊ ಸದ್ದು ಮಾಡಿದೆ.
ಸಮೀರ್ ಎಂಡಿಯವರ ‘ಧರ್ಮಸ್ಥಳ ಹಾರರ್’ ಇಷ್ಟರಮಟ್ಟಿಗೆ ಟ್ರೆಂಡ್ ಆದ ಬೆನ್ನಲ್ಲೇ ಇದೀಗ ಕ್ರಾಂತಿ ವ್ಲಾಗರ್ ಎಂಬ ತೆಲುಗು ಯುಟ್ಯೂಬರ್ ಒಬ್ಬರು ಸೌಜನ್ಯ ಪ್ರಕರಣದ ಬಗ್ಗೆ ಎಳೆಎಳೆಯಾಗಿ ವಿವರಿಸಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. ವಿಡಿಯೊದಲ್ಲಿ ಸಮೀರ್ ಮಾಡಿರುವ ವಿಡಿಯೊ ಕುರಿತು ಮಾತನಾಡಿದ ಇವರು ಆ ವಿಡಿಯೊ ನೋಡಿದ ಬಳಿಕ ಈ ವಿಡಿಯೊ ಮಾಡಿರುವುದಾಗಿ ಹೇಳಿಕೊಂಡರು.
ಈ ಮೂಲಕ ದಶಕದಿಂದ ಸಾಮಾಜಿಕ ಜಾಲತಾಣದಲ್ಲಿ ಮಂಕಾಗಿದ್ದ ಸೌಜನ್ಯ ಕೇಸ್ ಬೇರೆ ಭಾಷೆಗಳ ಜನರಿಗೂ ತಲುಪಿದ್ದು, ರಾಜ್ಯದ ಜನ ಹೇಗೆ ಪ್ರತಿಕ್ರಿಯಿಸಿದರೋ ಅದೇ ರೀತಿ ತೆಲುಗು ಮಂದಿ ಸಹ ಸೌಜನ್ಯ ಕೇಸ್‌ನಲ್ಲಿ ಶಾಮೀಲಾದವರ ಮಾನ ಹರಾಜು ಹಾಕಿದ್ದಾರೆ. ಕ್ರಾಂತಿ ವ್ಲಾಗರ್ಸ್ ಎಂಬಾತ ಬರೋಬ್ಬರಿ 1 ಕೋಟಿ 30 ಲಕ್ಷ ಸಬ್‌ಸ್ಕ್ರೈಬರ್‌ಗಳಿರುವ ಚಾನೆಲ್ ಹೊಂದಿದ್ದು, ಸದ್ಯ ಈಗಾಗಲೇ ವಿಡಿಯೊ ಎರಡು ಲಕ್ಷ ವೀಕ್ಷಣೆ ದಾಟಿದೆ.