ಸಮಗ್ರ ನ್ಯೂಸ್: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ತಂಗಿದ್ದ ದಂಪತಿ ಮತ್ತು ಅವರ ಮಗುವನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ನಡೆದಿದೆ. ನಿಶಾಂತ್ ಮತ್ತು ಚಂದನ ದಂಪತಿಗಳು ತಮ್ಮ ಮಗುವಿನೊಂದಿಗೆ ಭಾನುವಾರ ರಾತ್ರಿ ಬಂಡೀಪುರ ಸಮೀಪದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ದಂಪತಿ ಹಾಗೂ ಮಗು ರೆಸಾರ್ಟ್ ನಿಂದ ಹೊರ ಬಂದ ವೇಳೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಮೂವರನ್ನು ಅಪಹರಿಸಿದ್ದಾರೆಂದು ತಿಳಿದುಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದ ಪೊಲೀಸ್ ತಂಡ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿತು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರೀಶೀಲನೆ ನಡೆಸಿತು. ಘಟನೆಯ ಕುರಿತು ಮಾತನಾಡಿದ ಎಸ್ಪಿ ಬಿ.ಟಿ. ಕವಿತಾ, ಮಧ್ಯಾಹ್ನ 1 ಗಂಟೆಗೆ ಘಟನೆಯ ಬಗ್ಗೆ ರೆಸಾರ್ಟ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎರಡು ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಪತಿ, ಪತ್ನಿ ಮತ್ತು ಮಗುವನ್ನು ಕರೆದುಕೊಂಡು ಹೋಗಿದ್ದಾರೆಂದು ಹೇಳಿದರು.
ಇನ್ನೂ ಸಂಬಂಧಿಕರು ಅವರನ್ನು ಕರೆದುಕೊಂಡು ಹೋಗಿದ್ದಾರೋ ಅಥವಾ ಬೇರೆ ಯಾರಾದರೂ ಕರೆದುಕೊಂಡು ಹೋಗಿದ್ದಾರೋ ಎಂಬುದು ತಿಳಿದಿಲ್ಲ. ಅವರನ್ನು ಯಾರು ಕರೆದುಕೊಂಡು ಹೋದರು ಎಂಬುದರ ಬಗ್ಗೆ ರೆಸಾರ್ಟ್ಗೂ ಯಾವುದೇ ಮಾಹಿತಿ ಇಲ್ಲ. ಅದು ಅಪಹರಣವಾಗಿದ್ದರೆ, ಪ್ರತಿರೋಧ ಎದುರಾಗುತ್ತಿತ್ತು. ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.