ಸಮಗ್ರ ನ್ಯೂಸ್: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ವರರ ಹೆಸರು, ಮುಹೂರ್ತ, ದಿನಾಂಕ, ಮಂಟಪ, ಕುಟುಂಬಸ್ಥರ ಹೆಸರು, ವಿಳಾಸ ಸೇರಿದಂತೆ ಒಂದಷ್ಟು ಮಾಹಿತಿಗಳು ಇದ್ದೇ ಇರುತ್ತೆ. ಕುಲದೇವತಾ ಪ್ರಸನ್ನ, ಗುರು ಹಿರಿಯ ಆಶೀರ್ವಾದ ಹೀಗೆ ಒಂದೊಂದು ಮದುವೆ ಆಮಂತ್ರಣ ಪತ್ರಿಕೆಗಳು ಸಮುದಾಯ, ತಮ್ಮ ತಮ್ಮ ಆಚರಣೆಗೆ ಅನುಗುಣವಾಗಿ ಇರುತ್ತದೆ.
ಇದರ ನಡುವೆ ಹಲವು ವಿಶೇಷ ಹಾಗೂ ಭಿನ್ನ ಮದುವೆ ಪತ್ರಿಕೆ ಮೂಲಕವೂ ಗಮನಸೆಳೆಯುತ್ತಾರೆ. ಇದೀಗ ವಧು ವರರ ಹೆಸರಿನ ಜೊತೆಗೆ ಡೇಟ್ ಆಫ್ ಬರ್ತ್ ಕಡ್ಡಾಯ. ಇದು ಸರ್ಕಾರ ಹೊರಡಿಸಿದ ಆದೇಶ. ಹಾಗಂತ ಸುಮ್ಮನೆ ಒಂದು ಡೇಟ್ ಹಾಕಿ ಪ್ರಿಂಟ್ ಮಾಡಿದರೂ ಆಪಾಯ ತಪ್ಪಿದ್ದಲ್ಲ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ಹಾಗೂ ವರರ ಜನ್ಮ ದಿನಾಂಕ ಕಡ್ಡಾಯವಾಗಿ ಹಾಕಬೇಕು. ಆಮಂತ್ರ ಪತ್ರಿಕೆ ಪ್ರಿಂಟ್ ಮಾಡುವ ಪ್ರೆಸ್‌ಗಳು ಸುಖಾಸುಮ್ಮನೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಉಲ್ಲೇಖಿಸುವಂತಿಲ್ಲ. ಯಾರು ಮದುವೆ ಆಮಂತ್ರ ಪತ್ರಿಕೆ ಪ್ರಿಂಟ್ ಮಾಡಿಸುತ್ತಾರೋ, ಅವರು ತಮ್ಮ ಡೇಟ್ ಆಫ್ ಬರ್ತ್ ದಾಖಲೆ ನೀಡಬೇಕು. ಈ ದಾಖಲೆ ಪರಿಶೀಲಿಸಿ ಪ್ರಿಂಟಿಂಗ್ ಪ್ರೆಸ್ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ನಮೂದಿಸಬೇಕು. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ ಆದೇಶವನ್ನು ರಾಜಸ್ಥಾನ ಸರ್ಕಾರ ಹೊರಡಿಸಿದೆ. ವಿಶೇಷ ಅಂದರೆ ಈ ನಿಯಮ ಬಹುತೇಕ ಎಲ್ಲಾ ರಾಜ್ಯದಲ್ಲೂ ಜಾರಿಯಾಗುವ ಸಾಧ್ಯತೆ ಇದೆ.
ರಾಜಸ್ಥಾನ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆನಂದ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಾಲ್ಯ ವಿವಾಹ ತಡೆಗಟ್ಟಲು ಈ ನಿಯಮ ಜಾರಿಗೆ ತರಲಾಗಿದೆ. ರಾಜಸ್ಥಾನದಲ್ಲಿ ಬಾಲ್ಯ ವಿವಾಹ ಪದ್ಧತಿ ಹೆಚ್ಚಾಗಿದೆ. ಬಾಲ್ಯ ವಿವಾಹದ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಲು ಪ್ರೆಸ್‌ಗೆ ಮಾಹಿತಿ ಬಂದರೆ ಪೊಲೀಸರಿಗೆ ತಿಳಿಸಬೇಕು. ಒಂದು ವೇಳೆ ಮಾಹಿತಿ ನೀಡಲು ಪ್ರಿಂಟಿಂಗ್ ಪ್ರೆಸ್ ವಿಫಲವಾದರೆ, ಅಥವಾ ಮುಚ್ಚಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಬಾಲ್ಯ ವಿವಾಹ ತಡೆಗಟ್ಟಲು ಹಲವು ಕ್ರಮಗಳನ್ನು ರಾಜಸ್ಥಾನ ಸರ್ಕಾರ ಕೈಗೊಂಡಿದೆ. ಆದರೂ ಬಾಲ್ಯವಿವಾಹ ನಡೆಯುತ್ತಲೇ ಇದೆ. ಹೀಗಾಗಿ ಹೊಸ ಆದೇಶ ಹೊರಡಿಸಲಾಗಿದೆ.