ಸಮಗ್ರ ನ್ಯೂಸ್: ಮಂಗಳೂರು ವಿಶೇಷ ಆರ್ಥಿಕ ವಲಯದ (SEZ) ವ್ಯಾಪ್ತಿಯಲ್ಲಿರೋ ಕಾಂತೇರಿ ಜುಮಾದಿ ದೇವಸ್ಥಾನದ ಆಚರಣೆಗೆ ಎಂಎಸ್ಇಝಡ್ ಅಧಿಕಾರಿಗಳು ತಡೆ ಒಡ್ಡಿದ ಆರೋಪ ಕೇಳಿ ಬಂದಿದೆ.
ಮಂಗಳೂರು ಹೊರವಲಯದ ಬಜ್ಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಆದರೆ ಇದೀಗ ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು, ನೀರು ಇಡಲು ಬಿಡುವುದಿಲ್ಲವೆನ್ನುವ ಮೂಲಕ ಎಸ್ಇಝೆಡ್ ಅಧಿಕಾರಿಗಳು ವಿವಾದ ಸೃಷ್ಟಿಸಿದ್ದಾರೆ.
ತಿಂಗಳ ಸಂಕ್ರಮಣ ಪೂಜೆ ಸಲ್ಲಿಸಲು ಕಿರಿಕ್ ಮಾಡಿದ ಎಸ್ಇಝಡ್ ಅಧಿಕಾರಿಗಳ ನಡೆಯಿಂದ ಗುತ್ತುವಿನ ಕಾಂತೇರಿ ಜುಮಾದಿ ದೇವಸ್ಥಾನದಲ್ಲಿ ಸದ್ಯ ದೈವಾರಾಧನೆ ಸ್ಥಗಿತವಾಗಿದೆ. 2006ರಲ್ಲಿ ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ಬಲಿಯಾಗಿತ್ತು.
ಗುತ್ತುವಿನ ಯಜಮಾನ ಲಕ್ಷ್ಮಣ ಚೌಟ ಹೇಳುವ ಪ್ರಕಾರ, ಸಂಕ್ರಮಣ ಸೇವೆ ಆಗದೇ ಇದ್ದರೆ ತೊಂದರೆ ಆಗೋದು ನಿಶ್ಚಿತ. ಈ ಹಿಂದೆ ಭೂ ಸ್ವಾಧೀನ ಆದಾಗಲೂ ದೈವವೇ ನಮಗೆ ಚಾವಡಿ ಬಿಟ್ಟು ಹೋಗಬೇಡ ಅಂದಿತ್ತು. ಹೀಗಾಗಿ ಪ್ರಾಣವನ್ನೂ ಲೆಕ್ಕಿಸದೇ ಇಷ್ಟರ ತನಕ ಅಲ್ಲಿ ದೈವಾರಾಧನೆ ಮಾಡಿದ್ದೇವೆ. ಇನ್ನು ಮಾಡಲು ಅಸಾಧ್ಯ ಎಂದು ಕಂಪನಿ ಪಟ್ಟು ಹಿಡಿದರೆ ನಾವು ಏನು ಮಾಡೋದು? ಕಂಪೆನಿ ಒಳಗಡೆ ಮೂರು ಮೂರು ಸಲ ಬೆಂಕಿ ಬಿದ್ದಿದೆ. ಆದರೂ ಅವರಿಗೆ ಅರ್ಥ ಆಗಲ್ಲ. ಕಳೆದ ಸಂಕ್ರಮಣದ ದಿನ ನಮಗೆ ತಡೆ ಒಡ್ಡಿದ್ದಾರೆ, ಅಲ್ಲಿಗೆ ಹೋಗಲು ಬಿಡಲ್ಲ ಅಂತ ಗೇಟ್ನಲ್ಲಿ ನಿಲ್ಲಿಸಿದ್ದಾರೆ. ಮಾರ್ಚ್, ಎಪ್ರಿಲ್ನಲ್ಲಿ ಅಲ್ಲಿ ಚಾವಡಿ ನೇಮ, ಬಂಡಿ ಉತ್ಸವಗಳು ನಡೆಯುತ್ತೆ, ಅದಕ್ಕೆ ಏನ್ ಮಾಡೋದು? ನಮಗೆ ಯಾವ ಅಧಿಕಾರಿಯನ್ನ ಸಂಪರ್ಕಿಸಿದ್ರೂ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.