Ad Widget .

ಮತ್ತೆ ಹಕ್ಕಿಜ್ವರದ ಆತಂಕ| ಚಿಕನ್ ಸೇವನೆ ಬಗ್ಗೆ‌ ತಜ್ಞರು ಏನಂತಾರೆ? ಇಲ್ಲಿದೆ ಪಿನ್ ಟು ಪಿನ್ ಡೀಟೈಲ್ಸ್

ಸಮಗ್ರ ನ್ಯೂಸ್: ದೇಶದಲ್ಲಿ ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿದೆ. ಕಳೆದ ತಿಂಗಳು ನೆರೆಯ ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ಹಕ್ಕಿಜ್ವರ, ಇದೀಗ ಕರ್ನಾಟಕದ ಗಡಿಭಾಗದಲ್ಲೂ ಕಾಣಿಸಿದೆ. ಚಿಕ್ಕಬಳ್ಳಾಪುರದ ವರದಹಳ್ಳಿಯಲ್ಲಿ ಕೋಳಿಗಳು ಏಕಾಏಕಿ ಸಾವನ್ನಪ್ಪಿದ್ದು, ಹಕ್ಕಿಜ್ವರದ ಆತಂಕ ಎದುರಾಗಿದೆ.

Ad Widget . Ad Widget . Ad Widget . Ad Widget .

ಹಕ್ಕಿ ಜ್ವರ ಎಲ್ಲೆಡೆ ಹರಡುತ್ತಿರುವ ಕಾರಣ ಜನರು ಇದೀಗ ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವ ವಿಚಾರದಲ್ಲಿ ಆತಂಕ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವುದು ಸುರಕ್ಷಿತವೇ ಎನ್ನುವ ಭಾವನೆ ಹಲವರಲ್ಲಿದೆ. ಹಕ್ಕಿ ಜ್ವರ ಇರುವಾಗ ಕೋಳಿ ಮಾಂಸ, ಮೊಟ್ಟೆ ಸುರಕ್ಷಿತವೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

Ad Widget . Ad Widget .

ಏನಿದು ಹಕ್ಕಿ ಜ್ವರ?:
ಹಕ್ಕಿಜ್ವರ ಎನ್ನುವುದು ವೈರಸ್‌ನಿಂದ ಹರಡುವ ಸೋಂಕಾಗಿದೆ. ಇದು ಪಕ್ಷಿಗಳಲ್ಲಿ ಕಾಣಿಸುತ್ತದೆ. ಇದು ವ್ಯಾಪಕವಾಗಿ ಹರಡುವ ಕಾರಣ ಆತಂಕ ಸೃಷ್ಟಿಸುತ್ತದೆ. ಹಕ್ಕಿ ಜ್ವರವು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಹಕ್ಕಿ ಜ್ವರ ಇರುವ ಸಮಯದಲ್ಲಿ ಕೋಳಿ, ಮೊಟ್ಟೆ ತಿನ್ನಬಹುದೇ?:
ಹಕ್ಕಿ ಜ್ವರವು ಕೋಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆ ಕಾರಣಕ್ಕೆ ಕೋಳಿಗಳನ್ನು ಸಾಮೂಹಿಕ ಹತ್ಯೆ ಮಾಡಲು ಆದೇಶಿಸಲಾಗುತ್ತದೆ. ಸೋಂಕು ಹರಡುವ ಭೀತಿಯಿಂದ ಜನರು ಕೋಳಿ ಹಾಗೂ ಮೊಟ್ಟೆಯನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ಈ ಸಮಯದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ತಜ್ಞರು.

ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ:
ಸರಿಯಾದ ಪ್ಯಾಕೇಜಿಂಗ್ ಮತ್ತು ಶೇಖರಣಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಚಿಲ್ಲರೆ ಮಾರುಕಟ್ಟೆಗಳಿಂದ ಖರೀದಿಸಿದ ಮೊಟ್ಟೆಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ.ಆದಾಗ್ಯೂ, ಯಾವುದೇ ಸಂಭಾವ್ಯ ಸೋಂಕು ಹರಡುವುದನ್ನು ತಡೆಯಲು ಮೊಟ್ಟೆಯನ್ನು ಕನಿಷ್ಠ 175 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬೇಯಿಸುವುದು ಬಹಳ ಮುಖ್ಯ. ಹಳದಿ ಲೋಳೆ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಸಂಪೂರ್ಣವಾಗಿ ಬೇಯಿಸಬೇಕು. ಈ ಸಮಯದಲ್ಲಿ ಹಸಿ ಮೊಟ್ಟೆ ಸೇವನೆ ಸುರಕ್ಷಿತವಲ್ಲ. ಅರೆ ಬೆಂದ ಮೊಟ್ಟೆ ಕೂಡ ಸೇವಿಸುವುದನ್ನು ತಪ್ಪಿಸಿ. ಬೇಯಿಸಿದ ಮತ್ತು ಹುರಿದ ಮೊಟ್ಟೆಗಳು ಸುರಕ್ಷಿತ ಆಯ್ಕೆಗಳಾಗಿವೆ.

ಕೋಳಿ: ಸರಿಯಾದ ಅಡುಗೆ ಕ್ರಮ:
ಕೋಳಿಯನ್ನು ಕನಿಷ್ಠ 165 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬೇಯಿಸಬೇಕು. ಈ ಸಮಯದಲ್ಲಿ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿದ ನಂತರ ಬೇಯಿಸುವುದಕ್ಕೆ ಗಮನ ಕೊಡಬೇಕು. 165 ಡಿಗ್ರಿ ಫ್ಯಾರನ್‌ಹೀಟ್‌ ತಾಪಮಾನವು ಹಕ್ಕಿ ಜ್ವರ ರೋಗಕಾರಕಗಳನ್ನು ಒಳಗೊಂಡಂತೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸುತ್ತದೆ. ಅಪಾಯವನ್ನು ಕಡಿಮೆ ಮಾಡಲು ಹಸಿ ಮಾಂಸದ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಹಸಿ ಮಾಂಸವನ್ನು ಸ್ವಚ್ಛ ಮಾಡಲು ಕೂಡ ಪ್ರತ್ಯೇಕ ಪಾತ್ರೆಗಳನ್ನು ಬಳಸಿ. ಅವುಗಳನ್ನು ಸಾಧ್ಯವಾದಷ್ಟು ಹೊರಗಡೆಯೇ ಸ್ವಚ್ಛ ಮಾಡಿ. ಹಸಿ ಮಾಂಸವನ್ನು ಸ್ವಚ್ಛ ಮಾಡಿದ ನಂತರ ಪಾತ್ರೆ ಹಾಗೂ ಕೈಗಳನ್ನು ನೀಟಾಗಿ ತೊಳೆಯಿರಿ.

ಹಕ್ಕಿ ಜ್ವರ ಹರಡುವುದು ಹೇಗೆ?:
ಸೋಂಕಿತ ಪಕ್ಷಿಗಳು, ಅವುಗಳ ಮಲ ಅಥವಾ ಕಲುಷಿತ ಮೇಲ್ಮೈಗಳ ನೇರ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. ಕೋಳಿ ಸಾಕಣೆದಾರರು ಮತ್ತು ಮಾರಾಟಗಾರರಂತಹ ಕೋಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಸೋಂಕು ತಗಲುವ ಅಪಾಯ ಹೆಚ್ಚು.

Leave a Comment

Your email address will not be published. Required fields are marked *