ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ ಇದೀಗ ಮುಕ್ತಾಯಗೊಂಡಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಬ್ಲಾಗ್ ನಲ್ಲಿ ಬರೆದಿದ್ದು, ಇಂದು ‘ಏಕತೆಯ ಮಹಾ ಯಜ್ಞ ಪೂರ್ಣಗೊಂಡಿದೆ’ ಎಂದು ಹೇಳಿದ್ದಾರೆ. ಹಾಗೇ, ಈ ಬೃಹತ್ ಧಾರ್ಮಿಕ ಆಚರಣೆಯ ಸಮಯದಲ್ಲಿ ಭಕ್ತರು ಯಾವುದಾದರೂ ತೊಂದರೆಗಳನ್ನು ಎದುರಿಸಿದ್ದರೆ ಅದಕ್ಕೆ ಕ್ಷಮೆ ಕೋರುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಮಹಾ ಕುಂಭದಲ್ಲಿ 140 ಕೋಟಿ ದೇಶವಾಸಿಗಳ ನಂಬಿಕೆ 45 ದಿನಗಳ ಕಾಲ ಒಗ್ಗೂಡಿದ್ದರಿಂದ ಈ ಉತ್ಸವ ಅದ್ಭುತವಾಗಿ ಪೂರ್ಣಗೊಂಡಿದೆ. ಮಹಾ ಕುಂಭಮೇಳ ಮುಗಿದ ನಂತರ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ” ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.
ಮಹಾಕುಂಭಮೇಳದ ಯಶಸ್ಸಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ನೈರ್ಮಲ್ಯ ಕಾರ್ಮಿಕರು, ಪೊಲೀಸರು, ದೋಣಿ ಚಾಲಕರು, ಚಾಲಕರು, ಆಹಾರ ಪೂರೈಸುವ ಸ್ವಯಂಸೇವಕರು – ಎಲ್ಲರೂ ದಣಿವರಿಯದೆ ಕೆಲಸ ಮಾಡಿದರು. ಅನೇಕ ಅನಾನುಕೂಲತೆಗಳನ್ನು ಎದುರಿಸುತ್ತಿದ್ದರೂ ಪ್ರಯಾಗರಾಜ್ ಜನರು ಯಾತ್ರಿಕರನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ ರೀತಿ ವಿಶೇಷವಾಗಿ ಸ್ಫೂರ್ತಿದಾಯಕವಾಗಿತ್ತು. ಅವರಿಗೆ ಮತ್ತು ಉತ್ತರ ಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಇನ್ನೂ ಮೌನಿ ಅಮವಾಸ್ಯೆಯಂದು 30 ಭಕ್ತರನ್ನು ಬಲಿ ಪಡೆದ ಕಾಲ್ತುಳಿತವನ್ನು ಪರೋಕ್ಷವಾಗಿ ನೆನೆಸಿಕೊಂಡ ಪ್ರಧಾನಿ ಮೋದಿ, ‘ಅಷ್ಟು ದೊಡ್ಡ ಮಟ್ಟದಲ್ಲಿ ವ್ಯವಸ್ಥೆಗಳನ್ನು ಮಾಡುವುದು ಸುಲಭವಿರಲಿಲ್ಲ. ಅವುಗಳಲ್ಲಿ ಏನಾದರೂ ಕೊರತೆ ಆಗಿದ್ದರೆ ಕ್ಷಮಿಸಿ. ಗಂಗೆ, ಯಮುನೆ, ಸರಸ್ವತಿ ಹಾಗೂ ಜನರು ದೇವರ ಕೊಡುಗೆಯಾಗಿದ್ದು, ಅವರೆಲ್ಲರಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದರು.