ಸಮಗ್ರ ನ್ಯೂಸ್: ಹೆರಿಗೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟಿನಿಂದ ಬಾಣಂತಿಯೊಬ್ಬರು ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಾಗಿತ್ತು. ಕೊನೆಗೂ ಬಾಣಂತಿಯ ಅಸ್ವಸ್ಥತೆಗೆ ನಿಜ ಕಾರಣ ಬಯಲಾಗಿದ್ದು, ಖಾಸಗಿ ಆಸ್ಪತ್ರೆಯ ವಿರುದ್ಧ ಬಾಣಂತಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದೆ.
ಘಟನೆಯ ವಿವರ:
2024ರ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕದ ಶರಣ್ಯ ಲಕ್ಷ್ಮೀ ಎಂಬವರು ಹೆರಿಗೆಗಾಗಿ ದಾಖಲಾಗಿದ್ದರು. ಅವರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿ, ಡಿಸೆಂಬರ್ 2 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಡಿಸ್ಚಾರ್ಜ್ ಆದ ಬಳಿಕ ಮಹಿಳೆ ವಿಪರೀತ ಜ್ವರದಿಂದ ಬಳಲಿದ್ದರು. ಈ ಬಗ್ಗೆ ಮಹಿಳೆಯ ಕುಟುಂಬದವರು ಹೆರಿಗೆ ಮಾಡಿಸಿದ ವೈದ್ಯ ಡಾ ಅನಿಲ್ ಬಳಿ ವಿಚಾರಿಸಿದ್ದರು. ಜ್ವರದ ಔಷಧಿ ನೀಡುವಂತೆ ವೈದ್ಯರು ಸೂಚಿಸಿದ್ದರು. ಅಷ್ಟಾಗಿಯೂ ಜ್ವರ ಕಡಿಮೆ ಆಗದಿದ್ದಾಗ ಮನೆಯವರು ಮತ್ತೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ, ಹೆಮಟೋಮ್ ಆಗಿರಬಹುದು ಎಂದು ಹೇಳಿದ ವೈದ್ಯರು, ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿದ್ದರು.
ಅದಾದ ನಂತರ ಬಾಣಂತಿಯ ಸಮಸ್ಯೆ ಕಡಿಮೆಯೇ ಆಗದಿರುವುದರಿಂದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಇದೇ ವೇಳೆ ಹತ್ತು ಸೆಂಟಿಮೀಟರ್ ಮಾಫ್ ಫಾರ್ಮೇಶನ್ ಆಗಿರುವುದು ಪತ್ತೆಯಾಗಿದೆ. ಬಳಿಕ ಬೇರೆ ಔಷಧಿ ನೀಡಿದ ನಂತರ ಜ್ವರ ಕಡಿಮೆಯಾಗಿತ್ತು. ಆದರೆ ನಂತರ ಸಂಧಿ ನೋವು ಕಾಡಿತ್ತು. ಇದಕ್ಕೆ ಆರ್ಥೋ ಸಮಸ್ಯೆ ಇರಬಹುದು ಎಂದು ವೈದ್ಯ ಅನಿಲ್ ಹೇಳಿದ್ದರು.
ನಂತರ ಬಾಣಂತಿಯ ಕುಟುಂಬದವರು ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದ್ದರು. ಅಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ವೈದ್ಯರಿಗೆ, ಮಾರ್ಚ್ ಫಾರ್ಮೇಶನ್ ಆಗಿರುವುದು ಕಂಡುಬಂದಿದ್ದು, ಪುತ್ತೂರಿನ ವೈದ್ಯರ ಬಳಿ ಪ್ರಶ್ನಿಸಿದ್ದರು. ನಂತರ ಸಿಟಿ ಸ್ಕ್ಯಾನ್ ಮಾಡಿದಾಗ ವರದಿಯಲ್ಲಿ ಹೊಟ್ಟೆ ಒಳಗಡೆ ಸರ್ಜಿಕಲ್ ಬಟ್ಟೆ ಬಿಟ್ಟಿರುವ ವಿಚಾರ ತಿಳಿದುಬಂದಿದೆ. ಅಷ್ಟರಲ್ಲಾಗಲೇ ಸಿಸೇರಿಯನ್ನಾಗಿ ಒಂದುವರೆ ತಿಂಗಳಾಗಿದ್ದರಿಂದ ಬಾಣಂತಿ ಆರೋಗ್ಯ ಸಮಸ್ಯೆ ತೀರಾ ಹದಗೆಟ್ಟಿದ್ದು, ಅಪಾಯದ ಸ್ಥಿತಿ ತಲುಪಿತ್ತು. ನಂತರ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ಸರ್ಜಿಕಲ್ ಬಟ್ಟೆಯ ಮುದ್ದೆಯನ್ನು ವೈದ್ಯರು ಹೊರತೆಗೆದಿದ್ದಾರೆ.
ಸದ್ಯ ಡಾ ಅನಿಲ್ ವಿರುದ್ಧ ಬಾಣಂತಿಯ ಪತಿ ಗಗನ್ ದೀಪ್ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಯಿಂದಾಗಿ ಪತ್ನಿ ಮೂರು ತಿಂಗಳಿನಿಂದ ಮಾನಸಿಕ ಯಾತನೆಯಲ್ಲಿ ದಿನ ಕಳೆದಿದ್ದಾರೆ. ವೈದ್ಯರ ನಿರ್ಲಕ್ಷದಿಂದ ಭಾರಿ ಅನಾಹುತ ಆಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.