ಸಮಗ್ರ ನ್ಯೂಸ್: ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದರೆ ಶೇಕಡಾ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಕೋವಿಡ್ ಪೂರ್ವದ ದಿನಗಳಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ.
ಕಳೆದ ವರ್ಷ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಬಡ್ತಿ ಪಡೆಯಲು ಸಹಾಯ ಮಾಡುವುದಕ್ಕಾಗಿ ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡಾ 25 ಕ್ಕೆ ಇಳಿಕೆ ಮಾಡಿತ್ತು ಮತ್ತು ಗ್ರೇಸ್ ಮಾರ್ಕ್ಗಳನ್ನು ನೀಡಿತ್ತು.
”ವೆಬ್‌ಕಾಸ್ಟಿಂಗ್‌ನಂತಹ ಹೊಸ ಕ್ರಮಗಳನ್ನು ಪರಿಚಯಿಸಿದ್ದರಿಂದ ಕಳೆದ ವರ್ಷ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ಪಾಸಿಂಗ್ ಅಂಕವನ್ನು ಶೇಕಡಾ 25 ಕ್ಕೆ ಇಳಿಕೆ ಮಾಡಬೇಕಾಗಿ ಬಂದಿತ್ತು. ಆ ವ್ಯವಸ್ಥೆ ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ ಮತ್ತು ಶೇಕಡಾ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ” ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ತಿಳಿಸಿದ್ದಾರೆ.