ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಜನ ಭಯಗೊಂಡು ದೇಶ ತೊರೆಯಲು ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಾರಂಭಿಸಿದ್ದರು. ಈ ವೇಳೆ ಅಮೆರಿಕಾಗೆ ತೆರಳಲುತ್ತಿದ್ದ ವಿಮಾನ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ವಿಮಾನದ ಮೇಲಿಂದ ಮೂವರು ಬಿದ್ದಿದ್ದರು. ಇದೀಗ ಅವರ ಗುರುತು ಪತ್ತೆಯಾಗಿದ್ದು, ಮೂವರಲ್ಲಿ ಓರ್ವ ಅಘ್ಘಾನ್‍ನ ಯುವ ಫುಟ್‍ಬಾಲ್ ಆಟಗಾರ ಎಂದು ವರದಿಯಾಗಿದೆ.
ಆಗಸ್ಟ್ 16ರಂದು ಅಘ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ ವಿಮಾನಗಳನ್ನೇರಿ ದೇಶ ತೊರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವಿಮಾನದಿಂದ ಮೂವರು ಕೆಳಗೆ ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಆ ಮೂವರಲ್ಲಿ ಒಬ್ಬರು ಶಫೀವುಲ್ಲಾ ಮತ್ತೊಬ್ಬರು ಫಿದಾ ಮೊಹಮ್ಮದ್ ಎಂದು ಗುರುತು ಪತ್ತೆಯಾಗಿತ್ತು. ಬಳಿಕ ಇದೀಗ ಇನ್ನೊಬ್ಬರ ಗುರುತು ಕೂಡ ಪತ್ತೆಯಾಗಿದ್ದು ಅವರನ್ನು ಅಘ್ಘಾನಿಸ್ತಾನದ ಯುವ ಫುಟ್‍ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಅಘ್ಘಾನಿಸ್ತಾನದ ರಾಷ್ಟ್ರೀಯ ಫುಟ್‍ಬಾಲ್ ತಂಡ ಯುವ ಆಟಗಾರರಾದ ಝಾಕಿ ಅನ್ವಾರಿ ಅವರ ಸಾವಿನ ಬಗ್ಗೆ ದೃಢಪಡಿಸಿ ಸಂತಾಪ ಸೂಚಿಸಿದೆ.
ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ.
ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ.
ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಿ ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ.