ಸಮಗ್ರ ನ್ಯೂಸ್: ಅಡಿಕೆ ವ್ಯಾಪಾರ ಸಹಿತ ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳನ್ನು ಅಕ್ರಮ ವ್ಯವಹಾರದ ಮೂಲಕ ಉತ್ತರ ಭಾರತಕ್ಕೆ ಪೂರೈಕೆ ಮಾಡುವ ಮೂಲಕ ತೆರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳೂರಿನ ರಥಬೀದಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವಸ್ತಿಕ್ ಟ್ರೇಡಿಂಗ್ ಕಂಪೆನಿ, ನರೇಶ್ ಆಯಂಡ್ ಕೋ, ಶಿವ ಪ್ರೇಮ್ ಟ್ರೇಡರ್ಸ್ ಮತ್ತು ಪರಮೇಶ್ವರಿ ಟ್ರೇಡಿಂಗ್ ಕಂಪೆನಿಗಳ ಮೇಲೆ ದಾಳಿ ನಡೆದಿದೆ.
ಸಂಸ್ಥೆಯ ಕಚೇರಿಗಳಿಗೆ ಮಾತ್ರವಲ್ಲದೆ ಗೋಡೌನ್‌ಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಸಂಸ್ಥೆಗಳ ಮಾಲಕರ ಮನೆಗಳಿಗಳೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸಾವಿರಾರು ಕೋಟಿ ರೂಪಾಯಿ ಅಕ್ರಮ ವ್ಯವಹಾರ ನಡೆಸಿ ಸರಕಾರಕ್ಕೆ ತೆರಿಗೆ ವಂಚನೆ ನಡೆಸಿರುವುದು ಪತ್ತೆಯಾಗಿದೆ. ಮನೆಯಲ್ಲಿಯೂ ಕೋಟ್ಯಂತರ ರೂಪಾಯಿ ಮೌಲ್ಯದ ದಾಖಲೆ ಇಲ್ಲದ ಆಭರಣಗಳನ್ನೂ ವಶಕ್ಕೆ ಪಡೆಯಲಾಗಿದೆ ತಿಳಿದು ಬಂದಿದೆ. ಅಧಿಕಾರಿಗಳು ವಶಪಡಿಸಿಕೊಂಡಿರುವ ನಗದು -ಚಿನ್ನಾಭರಣಗಳ ನಿಖರ ಮೊತ್ತವನ್ನು ಅಧಿಕಾರಿಗಳು ಇನ್ನಷ್ಟೇ ಬಹಿರಂಗ ಪಡಿಸಬೇಕಿದೆ.
ಇವು ಉತ್ತರ ಭಾರತ ಮೂಲದ ಸತ್ಯೇಂದ್ರ ಶರ್ಮಾ ಮತ್ತು ಶಿವ ಕುಮಾರ್ ಶರ್ಮಾ ಅವರಿಗೆ ಸೇರಿದ ಕಂಪೆನಿಗಳಾಗಿವೆ. ಈ ಸಂಸ್ಥೆಗಳು ಉತ್ತರ ಪ್ರದೇಶ, ಬಿಹಾರ, ದಿಲ್ಲಿ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವು.