ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ, ತೋಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನಗಳನ್ನು ಕೇಂದ್ರ ಸರ್ಕಾರದ ʼಪ್ರಸಾದ್ʼ ಹಾಗೂ ʼಸ್ವದೇಶ್ ದರ್ಶನ್ʼ ಯೋಜನೆಯಡಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೆ ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಯ ಕುರಿತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಪ್ರವಾಸೋದ್ಯಮ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್‌ಅವರ ಗಮನಸೆಳೆದಿದ್ದಾರೆ.
ಸದನಲ್ಲಿ ಇಂದು ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರಿಗೆ ಪೂರಕ ಪ್ರಶ್ನೆಯನ್ನು ಕೇಳಿದ ಸಂಸದ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡದ ಜಿಲ್ಲೆಗಿರುವ ಪ್ರವಾಸೋದ್ಯಮ ಸಾಮರ್ಥ್ಯ ಹಾಗೂ ಅವಕಾಶಗಳನ್ನು ಎತ್ತಿ ಹಿಡಿದು ಮಾತನಾಡಿದರು. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡವು ಶ್ರೀಮಂತ ಕಲೆ, ಸಂಸ್ಕೃತಿಯನ್ನು ಹೊಂದಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗಳನ್ನು ಆಕರ್ಷಿಸುವ ಪ್ರೇಕ್ಷಣೀಯ ಸ್ಥಳಗಳು, ಭೂತ ಕೋಲ, ಕಂಬಳದಂಥ ಸ್ಥಳೀಯ ಆಚರಣೆಗಳು ವಿಶ್ವದ ಗಮನಸೆಳೆಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರಿನ ಮಹಾಲಿಂಗೇಶ್ವರ, ಪೊಳಲಿಯ ಶ್ರೀ ರಾಜರಾಜೇಶ್ವರಿ ಹೀಗೆ ಹಲವು ಐತಿಹ್ಯವಾದ ಪುರಾತನ ಪ್ರಸಿದ್ಧ ದೇವಾಲಯ ಹಾಗೂ ಪಾರಂಪರಿಕ ತಾಣಗಳು ಇಲ್ಲಿವೆ. ಹೀಗಿರುವಾಗ, ಇಲ್ಲಿನ ಪ್ರಸಿದ್ಧ ದೇವಾಲಯ, ಪ್ರೇಕ್ಷಣೀಯ ಸ್ಥಳಗಳನ್ನು ʼಪ್ರಸಾದ್ʼ ಹಾಗೂ ʼಸ್ವದೇಶ್ ದರ್ಶನ್ʼ ಯೋಜನೆ ಪಟ್ಟಿಗೆ ಸೇರಿಸುವ ಮೂಲಕ ಪ್ರವಾಸೋದ್ಯಮ ಸಚಿವಾಲಯದಿಂದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಮಂಗಳೂರು ಮತ್ತು ಕರಾವಳಿ ಕರ್ನಾಟಕದ ದೇವಾಲಯಗಳನ್ನು ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಗಳ ಅಡಿಯಲ್ಲಿ ಗುರುತಿಸಿ ಸೇರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಪಡೆಯದ ಪಾರಂಪರಿಕ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದಕ್ಕೆ ಹಾಗೂ ಈ ಯೋಜನೆಯಡಿ ಆಯ್ಕೆ ಮಾಡುವುದಕ್ಕೆ ಏನಾದರೂ ಮಾರ್ಗಸೂಚಿ ಅಥವಾ ಚೌಕಟ್ಟು ಇದೆಯೇ? ಹಾಗೆಯೇ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳನ್ನು ಡಿಜಿಟಲ್ ಕಂಟೆಂಟ್ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವುದಕ್ಕೆ ಅಥವಾ ಜನಪ್ರಿಯಗೊಳಿಸುವುದಕ್ಕೆ ಏನಾದರೂ ಯೋಜನೆ ರೂಪಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಕ್ಯಾ. ಚೌಟ ಅವರು ಟೂರಿಸಂ ಸಚಿವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಇನ್‌ಕ್ರೆಡಿಬಲ್ ಇಂಡಿಯಾದ ವೆಬ್‌ಸೈಟ್‌ಗೆ ಸಂಪೂರ್ಣವಾಗಿ ಹೊಸ ಸ್ವರೂಪ ನೀಡಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಪ್ರಸಿದ್ಧ ದೇವಾಲಯಗಳ ಹಾಗೂ ಪ್ರವಾಸಿ ತಾಣಗಳಿಗೆ ಸಂಬಂಧಿಸಿದ ಡಿಜಿಟಲ್ ಕಂಟೆಂಟ್‌ಗಳನ್ನು ವಿಡಿಯೋ ಅಥವಾ ಫೋಟೊ ರೂಪದಲ್ಲಿ ಕಳುಹಿಸುವಂತೆ ಕೋರಲಾಗಿದೆ. ಆ ಎಲ್ಲ ಡಿಜಿಟಲ್ ಕಂಟೆಂಟ್‌ಗಳನ್ನು ವೆಬ್‌ಸೈಟ್‌ನಲ್ಲಿ ಹಾಕುವ ಮೂಲಕ ಅಂಥಹ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂರು ದೇವಾಲಯಗಳನ್ನು ಪ್ರಸಾದ್ ಯೋಜನೆ ಪಟ್ಟಿಗೆ ಸೇರಿಸುವ ಬಗ್ಗೆಯೂ ಮುಂದಿನ ದಿನಗಳಲ್ಲಿ ವಾಸ್ತವಾಂಶ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.