ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇರುವ ಕಾರಣ, ಪೌತಿ ಖಾತೆ ಅಭಿಯಾನದ ಮೂಲಕ ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡುವ ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಿದೆ.
ಮಂಗಳವಾರ ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ. ಹೀಗಾಗಿ, ಮೃತರ ಹೆಸರಿನಲ್ಲಿ ಉಳಿದಿರುವ ಜಮೀನಿನ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ ಮನೆ ಬಾಗಿಲಿಗೆ ಪೌತಿ ಖಾತೆ ತಲುಪಿಸುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಯಾವುದೇ ವ್ಯಕ್ತಿಯ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನಲಾಗುವುದು. ಮನೆ ಬಾಗಿಲಿಗೆ ಹೋಗಿ ಪೌತಿ ಖಾತೆ ಅಭಿಯಾನ ನಡೆಸಿದ್ದಲ್ಲಿ ಅರ್ಹರಿಗೆ ಸುಲಭವಾಗಿ ಪೌತಿ ಖಾತೆ ಲಭ್ಯವಾಗುತ್ತದೆ. ಜಮೀನಿನ ವಾರಸುದಾರಿಕೆಯ ಪಹಣಿ ಸಿಗುತ್ತದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಯಾವ ಜಿಲ್ಲೆಯಲ್ಲಿ ಕೆಲಸದ ಒತ್ತಡ ಕಡಿಮೆ ಇದೆಯೋ ಅಂತಹ ಜಿಲ್ಲೆಗಳಲ್ಲಿ ಮೊದಲು ಈ ಅಭಿಯಾನ ಕೈಗೆತ್ತಿಕೊಳ್ಳಲಾಗುತ್ತದೆ. ನಂತರ ಬೇರೆ ಬೇರೆ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಈಗಲೂ ಪಹಣಿಯಲ್ಲಿ ಮೃತರ ಹೆಸರುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ವಾರಸುದಾರರಿಗೆ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಹೀಗಾಗಿ, ವಾರಸುದಾರರಿಗೆ ವರ್ಗಾವಣೆ ಜಮೀನು ಮಾಡಿಕೊಡಲು ಈ ಯೋಜನೆ ರೂಪಿಸಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.