ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಹಣ್ಣು ತರಕಾರಿ ತುಂಬಿ ವ್ಯಾಪಾರಸ್ಥರೊಂದಿಗೆ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಕಂದಕ್ಕಕ್ಕೆ ಉರುಳಿ9 ಜನರು ಜೀವ ಕಳೆದುಕೊಂಡು 10ಕ್ಕೂ ಜನ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ.
ಕ್ರೂಸರ್ ವಾಹನ ಪಲ್ಟಿಯಾಗಿ ಚಾಲಕ ಮತ್ತು ಮಂತ್ರಾಲಯ ಮಠದ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸೇರಿ ಒಟ್ಟು ನಾಲ್ವರು ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ರಾಯಚೂರಿನ ಸಿಂಧನೂರು ಬಳಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಜೀವ ಕಳೆದುಕೊಂಡಿರುವ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ರಾಯಚೂರಿನ ಸಿಂಧನೂರು ಬಳಿ ನಡೆದಿದ ಅಪಘಾತದಲ್ಲಿ ಮೃತ ವಿದ್ಯಾರ್ಥಿಗಳನ್ನು ಬಳ್ಳಾರಿಯ ಹಯವದನ (18), ಮಂತ್ರಾಲಯದವರಾದ ಸುಜಯೇಂದ್ರ(22) ಹಾಗೂ ಕೊಪ್ಪಳದ ಅಭಿಲಾಷ್ (20) ಎಂದು ಗುರುತಿಸಲಾಗಿದೆ. ಚಾಲಕ ಶಿವ (20) ಕೂಡ ಅಸುನೀಗಿದ್ದಾನೆ. ಹಂಪಿಯಲ್ಲಿ ನಡೆಯುತ್ತಿರುವ ಶ್ರೀ ನರಹರಿ ತೀರ್ಥರ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಂತ್ರಾಲಯದಿಂದ ಹಂಪಿಗೆ ಪ್ರಯಾಣಿಸುತ್ತಿದ್ದ ವೇಳೆ ಸಿಂಧನೂರು ಬಳಿ ಈ ದುರ್ಘಟನೆ ಸಂಭವಿಸಿದೆ.
ಹಾವೇರಿಯ ಸವಣೂರಿನಿಂದ ಕುಮಟಾದ ಸಂತೆಗೆ ತೆರಳುತ್ತಿದ್ದ ಲಾರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವ್ಯಾಪಾರಸ್ಥರು ತರಕಾರಿಗಳನ್ನು ತುಂಬಿಕೊಂಡು ತೆರಳುತ್ತಿದ್ದರು. ಯಲ್ಲಾಪುರದ ಅರೆಬೈಲ್ ಘಟ್ಟದ ಬಳಿ ಲಾರಿ ಕಂದಕಕ್ಕೆ ಉರುಳಿದೆ. ಪರಿಣಾಮ ಲಾರಿಯಲ್ಲಿದ್ದ 9 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಫಯಾಜ್ ಜಮಖಂಡಿ (45), ವಾಸೀಂ ಮುಡಗೇರಿ (35), ಇಜಾಜ್ ಮುಲ್ಲಾ (20), ಸಾದೀಕ್ ಭಾಷ್ (30), ಗುಲಾಮ್ ಹುಷೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24), ಜಲಾಲ ಬಾಷಾ (26) ಜೀವ ಕಳೆದುಕೊಂಡವರು. ಮೃತರೆಲ್ಲ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರು ಎಂದು ತಿಳಿದುಬಂದಿದೆ.