ಸಮಗ್ರ ನ್ಯೂಸ್ : ಡಿಸೆಂಬರ್ 13ನೇ ತಾರೀಕು ವಿಧಾನಪರಿಷತ್ ರಣರಂಗವಾಗಿತ್ತು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಪರಿಷತ್ ಸದಸ್ಯ ಸಿ.ಟಿ ರವಿ ಅವಾಚ್ಯ ಪದ ಬಳಸಿ ನಿಂದಿಸಿರುವ ಆರೋಪ ಕೇಳಿಬಂದಿತ್ತು. ಆದ್ರೆ ಪ್ರಕರಣ ಜೈಲು, ಕೋರ್ಟ್ ಮೆಟ್ಟಿಲೇರಿ ಸಿಟಿ ರವಿ ಸದ್ಯ ಬಂಧನದಿಂದ ಮುಕ್ತರಾಗಿದ್ದಾರೆ.
ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ.ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಕ್ಷಮೆ ಕೇಳದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಪುತ್ರ ಸೂರ್ಯನನ್ನು ಹತ್ಯೆ ಮಾಡಲಾಗುತ್ತದೆ ಎಂಬ ಬೆದರಿಕೆ ಪತ್ರ ಸಿಟಿ ರವಿಯವರ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಬಂದಿದೆ. ಈ ಸಂಬಂಧ ಸಿಟಿ ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮೈ ಮಾತನಾಡಿ, ಅಪರಿಚಿತ ವ್ಯಕ್ತಿಗಳಿಂದ ಎಂಎಲ್‌ಸಿ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿ.ಟಿ.ರವಿ ಅವರಿಗೆ ಹೆಚ್ಚಿನ ಭದ್ರತೆ ನೀಡುತ್ತೇವೆ ಎಂದು ಹೇಳಿದರು.15 ದಿನದೊಳಗೆ ಚಿಕ್ಕಮಗಳೂರಿನಿಂದ ಬಂದು ಬೆಳಗಾವಿ ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲು ಮುರಿದು ಸಾಯಿಸುತ್ತೇವೆ. ನಿನ್ನ ಮಗನನ್ನು ಸಾಯಿಸುತ್ತೇವೆ ಹುಷಾರಾಗಿ ಇರಿ ಎಂಬ ಬೆದರಿಕೆ ಪತ್ರ ಬಂದಿದೆ.