ಸಮಗ್ರ ನ್ಯೂಸ್: ಅತಿ ಅಪರೂಪದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನನ ನೀಡಿದ ಮಹಾತಾಯಿ. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನನ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ ಆರೋಗ್ಯವಾಗಿದ್ದಾರೆ. ಪ್ರಸವ ಪೂರ್ವ ಜನನ ಆಗಿದ್ದರಿಂದ ಸದ್ಯ ಮಕ್ಕಳಿಗೆ ಎನ್‌ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ಮಕ್ಕಳ ಜನನ ಬಹಳ ಅಪರೂಪವಾಗಿದ್ದು, ಇದು 7 ಲಕ್ಷ ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ. ಸ್ತ್ರೀರೋಗ ತಜ್ಞೆ, ಡಾ.ಜೋಯ್ಲೀನ್ ಡಿ ಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದರು. ಹೆರಿಗೆ ಸಂದರ್ಭ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ತಾಯಿ-ಮಕ್ಕಳಿಗೆ ಆರೈಕೆ ಮಾಡಿದೆ. ದ.ಕ.ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣ ಆಗಿದೆ.