ಸಮಗ್ರ ನ್ಯೂಸ್: ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದು ಮಲಿನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ದುಷ್ಕೃತ್ಯ ಎಸಗಲಾಗಿದೆ.
ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಗೋ ಹತ್ಯೆಯ ನಂತರದ ತ್ಯಾಜ್ಯವನ್ನು ದುರುಳರು ಎಸೆದಿದ್ದಾರೆ. ಪಶ್ಚಿಮ ಘಟ್ಟದಿಂದ ಹರಿದು ಧರ್ಮಸ್ಥಳ ಬಳಿ ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ಗೋವಿನ ರುಂಡ, ಮುಂಡ, ಚರ್ಮ ಎಸೆದಿರುವುದು ಕಂಡು ಬಂದಿದೆ.
ಪ್ರತಿನಿತ್ಯ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಈ ಪೈಕಿ ಹೆಚ್ಚಿನವರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇಷ್ಟೇ ಅಲ್ಲದೆ, ಧರ್ಮಸ್ಥಳ ದೇಗುಲದ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ನದಿಯ ನೀರನ್ನೇ ಬಳಸಲಾಗುತ್ತಿದೆ. ಹೀಗಾಗಿ, ಕೋಟ್ಯಂತರ ಭಕ್ತರ ನಂಬಿಕೆಗೆ ಗೋ ಹಂತಕರು ಕೊಳ್ಳಿ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಾರ್ಮಾಡಿ ಗ್ರಾಮದ ಅನ್ನಾರ್ ಬಳಿ ನದಿಯಲ್ಲಿ ಗೋವಿನ ರುಂಡ ಮುಂಡಗಳು ಪತ್ತೆಯಾಗಿರುವುದು ಈ ಪ್ರದೇಶದ ಹಲವು ಮನೆಗಳಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿರುವ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ. ಹೀಗೆ ಗೋ ಹತ್ಯೆ ಮಾಡಿದ ಬಳಿಕ ಅವುಗಳ ಅವಶೇಷವನ್ನು ಮೂಟೆ ಕಟ್ಟಿ ನದಿಗೆ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮತ್ತೊಂದೆಡೆ, ಉದ್ದೇಶಪೂರ್ವಕವಾಗಿ ಪವಿತ್ರ ನದಿ ನೇತ್ರಾವತಿಯನ್ನು ಅಪವಿತ್ರ ಗೊಳಿಸುವ ಹುನ್ನಾರ ಇದು ಎಂಬ ಆರೋಪ ಕೂಡ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಮಧ್ಯಪ್ರವೇಶಿಸಿದ್ದು, ನೇತ್ರಾವತಿ ನದಿಯನ್ನು ಮಲಿನಗೊಳಿಸಿದವರನ್ನು ಒಂದು ವಾರದೊಳಗೆ ಬಂಧಿಸಬೇಕೆಂದು ಪೊಲೀಸರಿಗೆ ಗಡುವು ವಿಧಿಸಿದೆ. ಒಂದು ವೇಳೆ, ತಪ್ಪಿತಸ್ಥರ ಬಂಧನವಾಗದಿದ್ದಲ್ಲಿ ಜಿಲ್ಲೆಯ ಹಿಂದೂ ನಾಯಕರೆಲ್ಲ ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಭಜರಂಗದಳ ಎಚ್ಚರಿಕೆ ನೀಡಿದೆ.
ಮೃತ್ಯುಂಜಯ ನದಿಯಲ್ಲಿ ಗೋವಿನ ಮೃತದೇಹ ಮತ್ತು ಅವಶೇಷಗಳು ಪತ್ತೆ ಆಗಿರುವ ಬಗ್ಗೆ ಈ ಹಿಂದೆ ಕೆಲವು ಬಾರಿ ದೂರು ನೀಡಿದ್ದರೂ ಧರ್ಮಸ್ಥಳ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದೀಗ ಒಮ್ಮಿಂದೊಮ್ಮೆಲೆ 11 ಮೂಟೆಗೂ ಹೆಚ್ಚಿನ ಗೋಮಾಂಸ ತ್ಯಾಜ್ಯ ಪತ್ತೆ ಆಗಿರುವುದು ಸ್ಥಳೀಯರನ್ನು ಮತ್ತು ಧರ್ಮಸ್ಥಳದ ಭಕ್ತರನ್ನು ಆಘಾತಕ್ಕೆ ಈಡುಮಾಡಿದೆ.