Ad Widget .

ಪುತ್ತೂರು: ಅಯ್ಯೋ ಬಸ್ಸಿಲ್ಲ!! ಈ ಕಾಯುವಿಕೆಗೆ ಕೊನೆ ಎಂದು?

ಸಮಗ್ರ ನ್ಯೂಸ್: ಕಳೆದೊಂದು ವಾರದಿಂದ ಪುತ್ತೂರು ವಿಭಾಗದ ಕೆಎಸ್ಆರ್ ಟಿಸಿ ನಿಲ್ದಾಣಗಳಲ್ಲಿ ಯಾರನ್ನ ಕೇಳಿದ್ರೂ ಇದೇ ಅಂಬೋಣ. ಯಾವದೇ ಊರುಗಳಿಗೂ ಸರಿಯಾದ ಬಸ್ ಗಳಿಲ್ಲ. ಜನರಂತೂ ಬಸ್ ಗಾಗಿ ಕಾದೂ ಕಾದೂ ಹೈರಾಣಾಗಿ ಹೋಗಿದ್ದಾರೆ. ಕೆಲವೊಂದು ಊರುಗಳಿಗೆ ತೆರಳಲು ಎರಡು ಗಂಟೆಗೂ ಅಧಿಕ ಸಮಯ ಕಾಯಬೇಕಾಗುತ್ತದೆ. ಕೊನೆಗೂ ಬಸ್ ಬಂದರೆ ಒಂದಡಿ ಎರಲೂ ಶತಾಯಗತಾಯ ಹೋರಾಟ ಮಾಡಬೇಕಾಗುತ್ತದೆ.

Ad Widget .

ಸಾರಿಗೆ ಬಸ್ ಗಳ ಈ ಕೊರತೆಗೆ ಕೆಎಸ್ಆರ್ ಟಿಸಿಯವರು ಖಾಸಗಿ ಕಂಪನಿಗಳನ್ನು ದೂರುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕವಾದ ಚಾಲಕರು ಗುತ್ತಿಗೆ ಅವಧಿ ಮುಗಿದ ಕಾರಣ ಕೆಲಸ ವಿಸರ್ಜಿಸಿ ಮನೆ ಕಡೆ ತೆರಳಿದ್ದಾರೆ. ಬಸ್ ಗಳು ಡಿಪೋಗಳಲ್ಲಿ ಬಂದು ನಿಂತಿವೆ. ಇತ್ತ ಸರ್ಕಾರ ಮಾತ್ರ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದೆ. ಜನರು ಬಸ್ ನಿಲ್ದಾಣಗಳಲ್ಲಿ ಧೂಳು ತಿನ್ನುತ್ತಿದ್ದಾರೆ.

Ad Widget . Ad Widget .

ಪನ್ನಗ ಮತ್ತು ಪೂಜಾ ಹೆಸರಿನ ಎರಡು ಗುತ್ತಿಗೆ ಕಂಪನಿಗಳು ಕೆಎಸ್ಆರ್ ಟಿಸಿಗೆ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ, ಪುತ್ತೂರು ವಿಭಾಗದ ಪುತ್ತೂರು, ಸುಳ್ಯ, ಡಿಪೋಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಚಾಲಕರನ್ನು ನೇಮಿಸಿತ್ತು. ಆದರೆ ಇದೀಗ ಚಾಲಕರ ಗುತ್ತಿಗೆ ರದ್ದಾಗಿದ್ದು, ಮತ್ತೆ ನೇಮಕಗೊಳ್ಳಲು 10 ಸಾವಿರ ರೂ ಠೇವಣಿ ನೀಡಬೇಕೆಂದು ಕಂಪನಿ ಚಾಲಕರಿಗೆ ಹೇಳಿದೆಯಂತೆ. ಈ ಹಿಂದೆ ಠೇವಣಿ ಇರಿಸಿದ 25 ಸಾವಿರ ಮೊತ್ತವನ್ನು ಹಿಂತಿರುಗಿಸದೇ ಮತ್ತೆ ಠೇವಣಿ ಕೇಳುವ ಕಂಪೆನಿಗೆ ಹೋಗಲು ಚಾಲಕರಿಗೆ ಮನಸ್ಸಿಲ್ಲ. ಆದ್ದರಿಂದ ಸಾರಿಗೆ ಬಸ್ ಗಳಲ್ಲಿ ಚಾಲಕರ ಕೊರತೆ ಉಂಟಾಗಿದ್ದು, ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ.

ಪುತ್ತೂರು ಬಸ್ ನಿಲ್ದಾಣದಿಂದ ಐದು, ಹತ್ತು ನಿಮಿಷಕ್ಕೆ ಸುಳ್ಯ, ಉಪ್ಪಿನಂಗಡಿ ಕಡೆಗೆ ಈ ಹಿಂದೆ ಬಸ್ ಗಳು ಓಡಾಡುತ್ತಿದ್ದವು. ಆದರೀಗ 30 ನಿಮಿಷ ಕಾದರೂ ಬಸ್ ಗಳು ಸಿಗೋದಿಲ್ಲ. ಇರುವ ನಿಯಮಿತ ಸಿಬ್ಬಂದಿಗಳನ್ನು ಬಳಸಿಕೊಂಡು ವಿಭಾಗಾಧಿಕಾರಿಗಳು ಬಸ್ ಗಳ ಓಡಾಟಕ್ಕೆ ಹರಸಾಹಸ ಪಟ್ಟರೂ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ವೇಗದೂತ ಬಸ್ ಗಳಷ್ಟೇ ನಿಯಮಿತವಾಗಿ ಓಡಾಡುತ್ತಿದ್ದು, ಉಚಿತ ಪ್ರಯಾಣದಿಂದಾಗಿ ಅವೂ ತುಂಬಿ ತುಳುಕುತ್ತಿವೆ. ಮುಖ್ಯವಾಗಿ ಪೀಕ್ ಅವರ್ ಗಳಲ್ಲಿ ಬಸ್ ಗಳ ಕೊರತೆ ಎದ್ದು ಕಾಣುತ್ತಿದ್ದು, ಬಸ್ ನಿಲ್ದಾಣಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿವೆ.

ಸರ್ಕಾರ ಹಾಗೂ ಸ್ಥಳೀಯ ಶಾಸಕರು ಈ ಕುರಿತು ತಕ್ಷಣ ಗಮನಹರಿಸಿ ಸಮಸ್ಯೆ ಸರಿಪಡಿಸುವುದು ಅತೀ ಅವಶ್ಯಕ. ಇಲ್ಲವಾದರೆ ಜನರು ತಿರುಗಿ ಬೀಳುವುದು ನಿಸ್ಸಂದೇಹ.

Leave a Comment

Your email address will not be published. Required fields are marked *