ಸಮಗ್ರ ನ್ಯೂಸ್: ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಸಿಟ್ಟಿನಲ್ಲಿ ಆಯಾ ಒಬ್ಬಾಕೆ ಎರಡೂವರೆ ವರ್ಷದ ಮಗುವಿನ ಜನನಾಂಗಕ್ಕೆ ಉಗುರಿನಿಂದ ಗೀರಿ ಗಾಯ ಮಾಡಿದ ಹೇಯ ಕೃತ್ಯ ಕೇರಳದ ತಿರುವನಂತರಪುರಂನ ಮಕ್ಕಳ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.ಘಟನೆ ಸಂಬಂಧ ಕೃತ್ಯವೆಸಗಿದ ಆಯಾ ಮತ್ತು ಆಕೆಯ ಇಬ್ಬರು ಸಹೋದ್ಯೋಗಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಕೃತ್ಯವೆಸಗಿದ ಆಯಾ ಅಜಿತಾ, ಮಹೇಶ್ವರಿ ಮತ್ತು ಸಿಂಧು ಎಂಬವರನ್ನು ಪೋಸ್ಕೋ ಖಾಯಿದೆಯಡಿ ಬಂಧಿಸಲಾಗಿದೆ.ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅಜಿತಾ ಎಂಬ ಆಯಾ ಕೃತ್ಯವೆಸಗಿದ್ದಾಳೆ. ಈ ಮಗು ಸದಾ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿತ್ತು ಎಂಬುದು ಆಕೆಯ ಸಿಟ್ಟಿಗೆ ಕಾರಣವಾಗಿತ್ತು. ಸಂತ್ರಸ್ತ ಮಗುವಿನ ಜೊತೆಗೆ ಆಕೆಯ ಐದು ವರ್ಷದ ಅಕ್ಕನೂ ಅದೇ ಕೇರ್ ಸೆಂಟರ್ ನಲ್ಲಿದ್ದಳು. ಇಬ್ಬರ ತಂದೆ-ತಾಯಿ ಆತ್ಮಹತ್ಯೆಗೈದು ಸಾವಿಗೀಡಾದ ನಂತರ ಮಕ್ಕಳನ್ನು ಈ ಕೇರ್ ಸೆಂಟರ್ ಗೆ ತಂದು ಬಿಡಲಾಗಿತ್ತು.
ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಉಗುರಿನಿಂದ ಜನನಾಂಗವನ್ನು ಗೀರಿ ಅಜಿತಾ ಗಾಯ ಮಾಡಿದ್ದರಿಂದ ಆಕೆಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಈ ಬಗ್ಗೆ ಕೇರ್ ಸೆಂಟರ್ ಗೆ ತಾತ್ಕಾಲಿಕವಾಗಿ ಬಂದಿದ್ದ ಮತ್ತೊಬ್ಬ ವ್ಯವಸ್ಥಾಪಕಿ ವಿಚಾರಣೆ ನಡೆಸಿದಾಗ ಮಗು ನಡೆದ ವಿಚಾರವನ್ನು ಬಾಯ್ದಿಟ್ಟಿದ್ದಾಳೆ.ಬಳಿಕ ಮಕ್ಕಳ ಹಕ್ಕುಗಳ ಆಯೋಗ ಪೊಲೀಸರಿಗೆ ದೂರು ನೀಡಿದೆ. ಅಜಿತಾ ಕೃತ್ಯವೆಸಗಿದ ನಂತರ ಉಳಿದಿಬ್ಬರು ಆಯಾಗಳು ಆಕೆಯ ಕುಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಹೀಗಾಗಿ ಅವರನ್ನೂ ಬಂಧಿಸಲಾಗಿದೆ. ಇದೀಗ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.