ಸಮಗ್ರ ನ್ಯೂಸ್: ಹಲವು ಹಗ್ಗ-ಜಗ್ಗಾಟಗಳ ನಡುವೆಯೇ ಹಾಸನ ನಗರದ ಹೊರವಲಯದ ಕೃಷ್ಣ ನಗರದಲ್ಲಿ ಗುರುವಾರ ಕಾಂಗ್ರೆಸ್‌ನ ಬೃಹತ್ ‘ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ’ ನಡೆಯಲಿದ್ದು, ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಸಚಿವರು, ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ.
ಜೆಡಿಎಸ್‌ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ನಾಯಕರು ಸಜ್ಜಾಗಿದ್ದು, ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಹಾಸನದಲ್ಲೇ ವಾಸ್ತವ್ಯ ಹೂಡಿ, ಖುದ್ದಾಗಿ ನಿಂತು ಸಮಾವೇಶದ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಅರಸೀಕೆರೆ ರಸ್ತೆಯ ಎಸ್.ಎಂ.ಕೃಷ್ಣ ಬಡಾವಣೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ದಗೊಂಡಿದೆ.
ಸಮಾವೇಶದ ಹಿನ್ನೆಲೆಯಲ್ಲಿ ಇಡೀ ಹಾಸನ ನಗರ ಕಾಂಗ್ರೆಸ್ ಮಯವಾಗಿದೆ. ನಗರದೆಲ್ಲೆಡೆ ‘ಕೈ’ ನಾಯಕರು, ಪಕ್ಷದ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಜನಕಲ್ಯಾಣ ಸ್ವಾಭಿಮಾನಿಸಮಾವೇಶ ಎಂಬ ಹೆಸರಿನಲ್ಲೇ ಬಹುತೇಕ ಪ್ಲೆಕ್ ಬ್ಯಾನರ್‌ಗಳನ್ನು ಪ್ರಿಂಟ್ ಮಾಡಲಾಗಿದೆ. ಪ್ಲೆಕ್ ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳು ಎದ್ದು ಕಾಣುತ್ತಿವೆ.
ಸಮಾವೇಶಕ್ಕೆ ಶುಭ ಕೋರಿ ‘ಕೈ’ ನಾಯಕರಿಂದ ನಾನಾ ರೀತಿಯ ಪ್ಲೆಕ್ಸ್ ಗಳನ್ನು ಹಾಕಲಾಗಿದೆ. ಬಿ.ಎಂ. ರಸ್ತೆಯುದಕ್ಕೂ ಫ್ರೆಕ್, ಬ್ಯಾನರ್, ಪಕ್ಷದ ಬಾವುಟಗಳು ರಾರಾಜಿಸುತ್ತಿವೆ. ಸಮಾವೇಶದ ಹೆಸರಿನ ಗೊಂದಲದ ಹಿನ್ನೆಲೆಯಲ್ಲಿ ನಾನಾ ಹೆಸರಿನ ಪ್ಲೆಕ್ಸ್ ಗಳನ್ನು ಅಳವಡಿಕೆ ಮಾಡಲಾಗಿದೆ. ಸಮಾವೇಶಕ್ಕೆ 2 ಲಕ್ಷ ಜನರ ನಿರೀಕ್ಷೆ ಇಟ್ಟುಕೊಂಡು ತಯಾರಿ ನಡೆಸಲಾಗಿದೆ. ಸಮಾವೇಶಕ್ಕೆ ನಾನಾ ಕಡೆಯಿಂದ ಜನರನ್ನು ಕರೆ ತರಲು ಸುಮಾರು 1,500 ಬಸ್‌ಗಳ ವ್ಯವಸ್ಥೆ ಕಲಿಸಲಾಗಿದೆ. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.