ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಜಾರಿ ಬಳಿಕವೂ ವಾಗ್ದಾಳಿ ಮುಂದುವರೆಸಿರುವ ಶಾಸಕ ಯತ್ನಾಳ್, ಬಿ.ಎಸ್.ಯಡಿಯೂರಪ್ಪ ಮೇಲಿನ ಹೆದರಿಕೆಯಿಂದ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಮೇಲೆ ಹಲವು ಕೇಸ್ ಗಳಿವೆ. ಹಾಗಾಗಿ ಅವರು ಹೆದರಬೇಕು. ನಾನ್ಯಾಕೆ ಹೆದರಲಿ ಎಂದು ಕಿಡಿಕಾರಿದ್ದಾರೆ.
ಯತ್ನಾಳ್ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ವಿಜಯೇಂದ್ರ ಇನ್ನೂ ಸಣ್ಣವ. ನಾನು ಯಾರ ಬೆಂಬಲದಿಂದಲೂ ಶಾಸಕನಾಗಿ ಆಯ್ಕೆಯಾದವನಲ್ಲ. ನಮ್ಮ ಸ್ವಂತ ಬಲದಿಂದ ಆಯ್ಕೆಯಾದವನು. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ. ಯಡಿಯೂರಪ್ಪ ವಿರುದ್ದ ಗಂಭೀರವಾದ ಪ್ರಕರಣಗಳಿವೆ. ಜಾಮೀನು ರಹಿತ ಕೇಸ್ ಗಳೂ ಇವೆ. ಹಾಗಾಗಿ ವಿಜಯೇಂದ್ರ ಹೆದರಿಕೊಳ್ಳಬೇಕು ಹೊರತು ನಾನಲ್ಲ ಎಂದರು.
ಹೊಂದಾಣಿಕೆ ರಾಜಕಾರಣ ಇರಬಾರದು ಎಂದು ವರಿಷ್ಠರೇ ಹೇಳಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ಇದು ಜನಪರ ಹೋರಾಟ. ಅವರದ್ದು ಕುಟುಂಬಶಾಹಿ ಹೋರಾಟ ಎಂದು ವಾಗ್ದಾಳಿ ನಡೆಸಿದರು.