ಸಮಗ್ರ ನ್ಯೂಸ್: ಪ್ರತಿಭಟನೆ, ಧರಣಿಗಳಿಗೆ ಅವಕಾಶ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ, ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮೇಲೆ ಶಿಸ್ತು ಕ್ರಮ ಜರುಗಿಸಲು, ಮಂಗಳೂರು ನಗರ ಕಮೀಷನರೇಟ್ ನಿಂದ ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು, ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಸಿಪಿಐಎಂ ಪೊಲೀಸ್ ಕಮೀಷನರ್ ಅಗರ್ ವಾಲ್ ಹಾಗೂ ಡಿಸಿಪಿ ಗೋಯಲ್ ನಡೆ ಪೊಲೀಸ್ ಇಲಾಖೆಯ ಗೌರವಕ್ಕೆ ತಕ್ಕುದಾಗಿಲ್ಲ. ಜನ ಸಾಮಾನ್ಯರು, ದುರ್ಬಲ ವಿಭಾಗಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲಾಗದ ಸ್ಥಿತಿ ಮಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ನೀತಿಗಳನ್ನು ಜಾರಿಗೊಳಿಸುವ ಯತ್ನ ಬಹಿರಂಗವಾಗಿಯೇ ಕಮೀಷನರ್ ಅಗರವಾಲ್ ನಡೆಸುತ್ತಿದ್ದಾರೆ. ಪ್ಯಾಲೆಸ್ತೀನ್ ಹಿಂಸಾಚಾರ ಖಂಡಿಸಿ, ರಾಷ್ಟ್ರೀಯ ಹೆದ್ದಾರಿ ದುರಸ್ಥಿಗೆ ಆಗ್ರಹಿಸಿ ನಡೆಸಿದ ಧರಣಿಗಳ ಸಂದರ್ಭ ಕಮೀಷನರ್ ನಡೆದುಕೊಂಡ ರೀತಿಯಿಂದ ಇದು ಬಹಿರಂಗಗೊಂಡಿದೆ.ಜನ ಸಾಮಾನ್ಯರ ದುಡಿಮೆ, ಸಂಪಾದನೆಯನ್ನು ಕಸಿದುಕೊಳ್ಳುತ್ತಿರುವ ಜೂಜು, ಮಟ್ಕಾ ಹಾವಳಿಯಿಂದ ಮಂಗಳೂರು ನಗರ ತತ್ತರಿಸಿದೆ.
ಕಮೀಷನರ್ ಅಗರವಾಲ್ ಮಂಗಳೂರಿನಿಂದ ನಿರ್ಗಮಿಸದೆ ಇಲ್ಲಿ ನೆಮ್ಮದಿ ಸಾಧ್ಯ ವಿಲ್ಲ.ಈ ಹಿನ್ನಲೆಯಲ್ಲಿ, ಕಮೀಷನರ್ ಅನುಪಮ್ ಅಗರವಾಲ್ ವರ್ಗಾವಣೆಗೆ ಒತ್ತಾಯಿಸಿ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಅದರಂತೆ, ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಎಂ ಘಟಕಗಳಿಗೆ ಕರೆ ನೀಡಿದೆ. ಜಿಲ್ಲೆಗೆ ಆಗಮಿಸುತ್ತಿರುವ ಗೃಹ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಗರವಾಲ್ ವಿರುದ್ದ ಕ್ರಮಕ್ಕೆ ಆಗ್ರಹಿಸಲು ನಿರ್ದರಿಸಲಾಗಿದೆ.
ಜಿಲ್ಲೆಯ ಜನಪರ, ಸಮಾನ ಮನಸ್ಕ ಸಂಘಟನೆಗಳು, ಎಡಪಕ್ಷಗಳ ಜಂಟಿ ಸಭೆಯನ್ನು ಆಯೋಜಿಸುವುದು, ಕಮೀಷನರ್ ವರ್ಗಾವಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಪ್ರಕಟನೆ ತಿಳಿಸಿದೆ.ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸುವ, ಸುಳ್ಳು ಮೊಕದ್ದಮೆ ಹೂಡುವ ಪೊಲೀಸ್ ಕಮೀಷನರ್ ಅವರ ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಸಭಾಪತಿ ಯು ಟಿ ಖಾದರ್ ಸಮರ್ಥಿಸಿರುವುದು ವಿಷಾದನೀಯ ಎಂದು ಸಿಪಿಐಎಂ ಹೇಳಿದೆ. ಸ್ಪೀಕರ್ ಹುದ್ದೆ ಸಾಂವಿಧಾನಿಕವಾದದ್ದು, ಅದು ಸರಕಾರದ ಭಾಗ ಅಲ್ಲ. ಸ್ಪೀಕರ್ ಆದವರು ನಿಷ್ಪಕ್ಷಪಾತವಾಗಿರಬೇಕು. ರಾಜಕಾರಣ, ಆಡಳಿತಾತ್ಮಕ ವಿಷಯಗಳು ಅವರ ವ್ಯಾಪ್ತಿಗೆ ಬರುವುದಿಲ್ಲ. ವ್ಯಾಪ್ತಿ ಮೀರಿ ಮಾತಾಡುವುದು, ಪೊಲೀಸ್ ಅತಿರೇಕಗಳನ್ನು ಸಮರ್ಥಿಸುವುದು ಸ್ಪೀಕರ್ ಸ್ಥಾನದಲ್ಲಿ ಕೂತವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದೆ.