ಆ.15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ಸಿಹಿ ಹಂಚುವ ಮೂಲಕ ಆಚರಣೆ ಜೋರಾಗಿತ್ತು. ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್ ಅವರು ರಾಷ್ಟ್ರಗೀತೆ ಹಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅದಕ್ಕೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಸುದೀಪ್ ಅವರು ಭಕ್ತಿ-ಭಾವದಿಂದ ಹಾಡಿದ ಪರಿ ಕಂಡು ಅಭಿಮಾನಿಗಳು ಕೂಡ ಸೆಲ್ಯೂಟ್ ಮಾಡಿದರು. ಆದರೆ ಕೆಲವರಿಗೆ ಅದರಲ್ಲೊಂದು ತಪ್ಪು ಕಾಣಿಸಿತು!
ರಾಷ್ಟ್ರಗೀತೆಯನ್ನು 48ರಿಂದ 52 ಸೆಕೆಂಡ್ ಒಳಗೆ ಹಾಡಬೇಕು. ಆದರೆ ಸುದೀಪ್ ಅವರು ಅಂದಾಜು 65 ಸೆಕೆಂಡ್ಗಳಲ್ಲಿ ಹಾಡಿದರು. ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್ ಮಾಡಿದ್ದಾರೆ. ‘ಸರಿಯಾಗಿ ರಾಷ್ಟ್ರಗೀತೆ ಹಾಡಿ ಸರ್. ನಿಮ್ಮನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ನೀವು ಟಾಪ್ ನಟ ಆಗಿರಬಹುದು. ಆದರೆ 48-52 ಸೆಕೆಂಡ್ಗಳ ಒಳಗೆ ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಕೂಡ ಇಲ್ವಾ?’ ಎಂಬ ಕಮೆಂಟ್ ಬಂದಿದೆ. ಅದಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
‘ಇದು (ಕಮೆಂಟ್) ತುಂಬ ಒರಟಾಗಿದೆ. ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ಏನು ಅನಿಸಿತೋ ಅದನ್ನು ಮಾಡಿದ್ದೇನೆ. ಜೈ ಹಿಂದ್’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ತಪ್ಪು ಒಪ್ಪಿಕೊಂಡ ಅವರ ನಡೆಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಇದು ನಿಮ್ಮ ದೊಡ್ಡ ಗುಣ. ನೀವು ನಿಜವಾದ ಜಂಟಲ್ಮನ್’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಟ್ವಿಟರ್ನಲ್ಲಿ ಅವರಿಗೆ 25 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಟ್ವೀಟ್ಗಳ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾರೆ. ‘ನೆಗೆಟಿವ್ ಕಮೆಂಟ್ ಮಾಡುವವರಿಗೆ ಪ್ರತಿಕ್ರಿಯೆ ನೀಡಬೇಡಿ ಸರ್’ ಎಂದು ಹಲವು ಅಭಿಮಾನಿಗಳು ಕಿಚ್ಚನ ಬಳಿ ಮನವಿ ಮಾಡಿಕೊಂಡಿದ್ದಾರೆ.