ಸಮಗ್ರ ನ್ಯೂಸ್:ಇಂದುಮುಂಜಾನೆ ನೋಯ್ದಾ ಮತ್ತು ಪಶ್ಚಿಮ ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ದಟ್ಟ ಮಂಜಿನಿಂದ ಆವರಿಸಿದ ವಾತಾವರಣದಿಂದಾಗಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು ಹದಿನೈದಕ್ಕೂ ಹೆಚ್ಚು ಗಾಯಗೊಂಡಿರುವ ಘಟನೆ ಮಂಗಳವಾರ (ನ.19) ಬೆಳಿಗ್ಗೆ ಸಂಭವಿಸಿದೆ.
ಕಡಿಮೆ ಗೋಚರತೆಯಿಂದಾಗಿ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಇದೇ ವೇಳೆ ಪಾಣಿಪತ್‌ನಿಂದ ಮಥುರಾಗೆ ತೆರಳುತ್ತಿದ್ದ ಬಸ್ ಟ್ರಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದೇ ರೀತಿ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯ ನಾಸಿರ್‌ಪುರ ಬಳಿ ಪಿಕ್ ಅಪ್ ವಾಹನವೊಂದು ಹೆದ್ದಾರಿಯಲ್ಲಿ ಕೆಟ್ಟು ನಿಂತ ಪರಿಣಾಮ ವಾಹನ ಸವಾರರಿಗೆ ಗೋಚರಿಸದೆ ಸರಣಿ ಅಪಘಾತಗಳು ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಲಂದ್‌ಶಹರ್ ಹಾಗೂ ಬದೌನ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ರು ಬೈಕ್ ಸವಾರರು ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ದಟ್ಟ ಮಂಜು ಆವರಿಸಿದ ಪರಿಣಾಮ ವಾಹನ ಸವಾರರಿಗೆ ಕಡಿಮೆ ಗೋಚರತೆ ಕಂಡುಬಂದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಷಕಾರಿ ಗಾಳಿಯ ಗುಣಮಟ್ಟದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿವೆ. ಅಲ್ಲದೆ ದಟ್ಟ ಮಂಜಿನಿಂದ ಕೂಡಿದ ವಾತಾವರಣ ಆರೋಗ್ಯದ ಮೇಲೆ ಪರಿಣಾಮ ಬೀರುವಂತಾಗಿದೆ.