ಸಮಗ್ರ ನ್ಯೂಸ್: ಸಿಮೆಂಟ್ ಸಾರಣೆ ಕೆಲಸದ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶಿವಪ್ಪ (69) ಎಂಬುವರು ಕೆಲಸದ ವೇಳೆ ಮೃತಪಟ್ಟಿದ್ದು, ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಸಮೀಪದ ರಸ್ತೆ ಬದಿಯಲ್ಲಿ ಇರಿಸಿಹೋದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಸಾಗಿಸಲು ಬಳಸಿದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ನ.16ರಂದು ಬೆಳಿಗ್ಗೆ ತಂದೆಯವರು ಮನೆಯಲ್ಲಿದ್ದ ವೇಳೆ ಸಾಲ್ಮರದ ತಾವ್ರೊ ಇಂಡಸ್ಟ್ರೀಸ್ ಸಂಸ್ಥೆಯ ಹೆನ್ರಿ ತಾವ್ರೊ ಅವರು ಬಂದು ಕೆಲಸಕ್ಕೆಂದು ಅವರನ್ನು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನ ವೇಳೆ ಅದೇ ಪಿಕಪ್ ವಾಹನದಲ್ಲಿ ಅವರನ್ನು ಕರೆದುಕೊಂಡು ಬಂದುಮನೆಯ ಎದುರಿನ ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದರು. ಈ ವೇಳೆ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇದ್ದೆವು. ಕೂಡಲೇ ರಸ್ತೆ ಬದಿಗೆ ಹೋಗಿ ನೋಡಿದಾಗ ತಂದೆ ಮೃತಪಟ್ಟಿರುವುದು ಕಂಡುಬಂತು. ಅವರು ಆಕಸ್ಮಿಕವಾಗಿ ಮೃತಪಟ್ಟಿರುವುದು ಸಂಶಯಕ್ಕೆ ಎಡೆಮಾಡಿದೆ. ಅಲ್ಲದೆ, ಮೃತಪಟ್ಟವರನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನು ಬಿಟ್ಟು ರಸ್ತೆ ಬದಿಯಲ್ಲೇ ಮಲಗಿಸಿ ಹೋಗಿರುವುದು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ’ ಎಂದು ಅವರ ಪುತ್ರಿ ಉಷಾ ಪೊಲೀಸರಿಗೆ ದೂರು ನೀಡಿದ್ದಾರೆ.
ಪರಿಶಿಷ್ಟ ಸಂಘಟನೆಗಳ ಮುಖಂಡರು, ಹಾಗೂ ಬಿಜೆಪಿ ಮುಖಂಡ ಅರುಣ್‌ಕುಮಾರ್ ಪುತ್ತಿಲ ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಮಾತುಕತೆ ನಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.