ಸಮಗ್ರ ನ್ಯೂಸ್: ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ T20 ಪಂದ್ಯದಲ್ಲಿ ಭಾರತ ಸುಲಭದ ಗೆಲುವು ದಾಖಲಿಸಿದೆ. 283 ರನ್ ಗಳ ಬೃಹತ್ ಮೊತ್ತ ದಾಖಲಿಸಿದ್ದ ಭಾರತ ತಂಡ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದೆ.
284 ರನ್ ಗಳ ಬೆಟ್ಟದಷ್ಟು ದೊಡ್ಡ ಮೊತ್ತದ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 148 ರನ್ ಗಳನ್ನಷ್ಟೇ ಸಾಧಿಸಲು ಶಕ್ತವಾಯ್ತು. ಈ ಹಿನ್ನೆಲೆ 135 ರನ್ ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ – 20 ಪಂದ್ಯದಲ್ಲಿ ಸರಣಿಯಲ್ಲಿ ಮೊದಲ ಬಾರಿಗೆ ಸೂರ್ಯ ಕುಮಾರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಶುಕ್ರವಾರ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ T20I ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು 1 ವಿಕೆಟ್‌ಗೆ 283 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದ್ದು, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ತಮ್ಮ ತಮ್ಮ ಶತಕಗಳೊಂದಿಗೆ ಮಿಂಚಿದರು.
ಕೇರಳ ಮೂಲದ ಸಂಜು ಸ್ಯಾಮ್ಸನ್ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮೂರು ಶತಕಗಳನ್ನು ಸಿಡಿಸಿದ T20I ಕ್ರಿಕೆಟ್‌ನಲ್ಲಿ ಮೊದಲ ಬ್ಯಾಟರ್ ಆಗಿದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅಲ್ಲದೆ, ಐಸಿಸಿಯ ಪೂರ್ಣ ಸದಸ್ಯರ ನಡುವಿನ ಪಂದ್ಯವೊಂದರಲ್ಲಿ ಇಬ್ಬರು ಬ್ಯಾಟರ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದು ಇದೇ ಮೊದಲು. ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಈ ದಾಖಲೆ ನಿರ್ಮಿಸಿದ್ದಾರೆ.
ಒಟ್ಟಾರೆ ಭಾರತವು ಬೃಹತ್ ಮೊತ್ತವನ್ನು ದಾಖಲಿಸಿದೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕ ವಿಕೆಟ್‌ಗೆ 73 ರನ್‌ಗಳ ಜೊತೆಯಾಟದೊಂದಿಗೆ ಉತ್ತಮ ಅಡಿಪಾಯ ಹಾಕಿದರು. ಬೌಲರ್ ಲುಥೋ ಸಿಪಾಮ್ಲಾ ಅಭಿಷೇಕ್ ಅವರನ್ನು ಔಟ್ ಮಾಡಿದರು. ನಂತರ ಬಂದ ಬ್ಯಾಟರ್ ತಿಲಕ್ ವರ್ಮಾ ಅವರು ತಮ್ಮ ಎರಡನೇ ಸತತ T20I ಶತಕವನ್ನು ಗಳಿಸುವ ಮೂಲಕ ಇನ್ನಷ್ಟು ಅಪಾಯಕಾರಿ ಎಂದು ಸಾಬೀತು ಮಾಡಿದರು.. ಇನ್ನೊಂದು ತುದಿಯಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಕಾಡಿದ ಸ್ಯಾಮ್ಸನ್ ಅವರನ್ನು ಮರೆಯುವಂತಿಲ್ಲ. ತಿಲಕ್ 47 ಎಸೆತಗಳಲ್ಲಿ 120 ರನ್ ಗಳಿಸಿ ಔಟಾಗದೆ ಉಳಿದರೆ, ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ 109 ರನ್ ಗಳಿಸಿದರು. ಈ ಮೂಲಕ 20 ಓವರ್ ಗೆ ಒಂದು ವಿಕೆಟ್ ನಷ್ಟಕ್ಕೆ 283 ರನ್ ದಾಖಲಿಸಿದೆ.