ಸಮಗ್ರ ನ್ಯೂಸ್:ಇತ್ತೀಚೆಗಷ್ಟೇ ತೆಲಂಗಾಣ ಮೂಲದ ಪ್ರಿಯಕರನೊಬ್ಬ 16 ಲಕ್ಷ ರೂ. ಹಣದ ದಾಹಕ್ಕೆ ತಾನು ಇಷ್ಟಪಟ್ಟು ಪ್ರೀತಿಸಿದ ಹುಡುಗಿಯನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರಿಯಕರನ ಮೋಸದ ಜಾಲಕ್ಕೆ ತುತ್ತಾದ 30 ವರ್ಷದ ಸ್ವಾತಿ, 20 ತುಂಡಾಗಿ ಭೂಮಿ ಸೇರಿದ ಘಟನೆ ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಜೂಲುರುಪಾಡು ಮಂಡಲದ ಕೊಮ್ಮುಗುಡೆಂನಲ್ಲಿ ಸಂಭವಿಸಿದೆ.
ಆರೋಪಿ ವೀರಭದ್ರ ಮತ್ತು ಸ್ವಾತಿ ಇಬ್ಬರು ಪ್ರೇಮಿಗಳು. ಇತ್ತೀಚೆಗಷ್ಟೇ ಸಿಂಗರೇಣಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ ಇವರಿಬ್ಬರು, ಪತಿ-ಪತ್ನಿಯರಾದ ರತ್ನಕುಮಾರ್ ಮತ್ತು ಪಾರ್ವತಿ ಎಂಬುವರಿಂದ 16 ಲಕ್ಷ ರೂ. ಹಣ ಪಡೆದಿದ್ದರು. ಬಳಿಕ ತಮ್ಮ ಸುಳಿವೇ ಸಿಗದಂತೆ ಅವರಿಂದ ತಲೆಮರಿಸಿಕೊಂಡಿದ್ದರು. ಒಂದೆಡೆ ದಂಪತಿಗಳಿಗೆ ಸಿಂಗರೇಣಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಅತ್ತ ಕೆಲಸವೂ ಕೊಡಿಸದೆ, ಹಣವು ವಾಪಾಸ್ ನೀಡಿದ ಪ್ರೇಮಿಗಳು, ರತ್ನಕುಮಾರ್ ಮತ್ತು ಪಾರ್ವತಿ ಕಣ್ಣೀರಿಗೆ ಕಾರಣರಾದರು. ದೂರವಾಣಿ ಕರೆಗೆ ಸಿಗದ ಇವರಿಬ್ಬರಿಂದ ತಾವು ಮೋಸ ಹೋಗಿರುವುದನ್ನು ಅರಿತ ದಂಪತಿ ಹಣಕ್ಕಾಗಿ ಒತ್ತಾಯಿಸಿದ್ದಾರೆ. ಆದರೆ, ಯಾವ ಪ್ರಯತ್ನವೂ ಫಲಿಸಿಲ್ಲ.
ವೀರಭರಂ ಮತ್ತು ಸ್ವಾತಿ ಹಣ ವಾಪಸ್ ನೀಡದೆ ಸ್ಥಳದಿಂದ ಪರಾರಿಯಾಗಿದ್ದರು. ಹಣ ಕಳೆದುಕೊಂಡು ಕೆಲಸ ಸಿಗದೆ ಇದ್ದಾಗ ಪಾರ್ವತಿ ಮತ್ತು ರತ್ನಕುಮಾರ್, ಕೈಯಲ್ಲಿದ್ದ ಹಣವನ್ನೆಲ್ಲ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನೌಕರಿಗಾಗಿ ತಂದ ಹಣ ವಾಪಾಸ್ ಇಲ್ಲ. ಅತ್ತ ಸಾಲ ತೀರಿಸಲು ದಾರಿಯೂ ಕಾಣದ ಕಾರಣ ದಂಪತಿ ಸಾಯಲು ನಿರ್ಧರಿಸಿ, ತಮ್ಮ ಸಾವಿಗೆ ಪ್ರೇಮಿಗಳೇ ಕಾರಣ ಎಂದು ತಿಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ಸಾವಿನ ಸುದ್ದಿ ತಿಳಿದ ಸ್ವಾತಿ, ಸಂತ್ರಸ್ತೆಯ ಕುಟುಂಬದ ಸದಸ್ಯರ ನೋವು ಕಂಡು, ತಾವು ಪಡೆದ 16 ಲಕ್ಷ ರೂಪಾಯಿ ಹಣವನ್ನು ಹಿಂದಿರುಗಿಸುವುದಾಗಿ ಪ್ರಿಯಕರನ ಬಳಿ ಕೇಳಿದ್ದಾಳೆ. ಆದರೆ, ಇದಕ್ಕೆ ವೀರಭದ್ರ ಒಪ್ಪಿಲ್ಲ. ಇದೇ ವಿಷಯಕ್ಕಾಗಿ ಅನೇಕ ಬಾರಿ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದುಹೋಗಿದೆ. ಆದರೆ, ಪ್ರೇಯಸಿಯ ಮಾತಿನಂತೆ ಹಣ ವಾಪಾಸ್ ಕೊಡಲು ಬಯಸದ ಪ್ರಿಯಕರ, ಏನೇ ಮಾಡಿದರೂ ತನ್ನಿಂದ 16 ಲಕ್ಷ ರೂ. ಕೀಳಲು ಈಕೆ ಬಿಡುವಂತೆ ಕಾಣಿಸುತ್ತಿಲ್ಲ. ಇವಳು ಇದ್ದರೆ ತಾನೇ, ನನ್ನ ಹಣ ಹೋಗೋದು? ಇವಳೇ ಇಲ್ಲ ಅಂದರೆ ಅದನ್ನು ಕೇಳುವವರು ಇನ್ಯಾರು ಇರುವುದಿಲ್ಲ ಎಂದು ತಿಳಿದು ಸ್ವಾತಿಯನ್ನು ಕೊಲೆ ಮಾಡಿದ್ದಾನೆ.
ಆಕೆಯನ್ನು ಹತ್ಯೆಗೈದು, ದೇಹವನ್ನು 20 ತುಂಡುಗಳಾಗಿ ಮಾಡಿದ ವೀರಭದ್ರ, ದೇಹದ ಭಾಗಗಳನ್ನು ಗೋಣಿ ಚೀಲಕ್ಕೆ ತುಂಬಿ, ಅದನ್ನು ಮಣ್ಣಿನಲ್ಲಿ ಹೂತ್ತಿಟ್ಟಿದ್ದಾನೆ. ಸ್ವಾತಿ ನಾಪತ್ತೆಯಾದ ಹಿನ್ನಲೆ ಗಾಬರಿಗೊಂಡ ಹೆತ್ತವರು, ಮಗಳು ಕಾಣೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕೇಸ್ ಬೆನ್ನತ್ತಿದ ಪೊಲೀಸರಿಗೆ ವೀರಭದ್ರ ಆರೋಪಿ ಎಂಬುದು ಸಾಬೀತಾಗಿದೆ. ತಮ್ಮ ಆಳವಾದ ತನಿಖೆಯ ಮೂಲಕ ಸ್ವಾತಿಯನ್ನು ಹೇಗೆ ಕೊಲೆ ಮಾಡಿದ ಎಂಬುದನ್ನು ಬಾಯ್ದಿಡಿಸುವಲ್ಲಿ ಇದೀಗ ಖಾಕಿ ಪಡೆ ಯಶಸ್ವಿಯಾಗಿದೆ,(ಏಜೆನ್ಸಿಸ್).