ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದ ಅಕ್ಕ ಕೆಫೆ ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಂ ಜೊತೆಗೂಡಿ ಅನುಷ್ಠಾನಕ್ಕೆ ತಂದಿದೆ. ‘ಅಕ್ಕ ಕೆಫೆ’ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಯಲ್ಲೇ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುತ್ತಿವೆ.
ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಸ್ವ ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು ನಿರ್ವಹಿಸುತ್ತವೆ, ಮೂಲಸೌಕರ್ಯ ಬೆಂಬಲ ಸೇರಿದಂತೆ ಸೆಟಪ್ ವೆಚ್ಚಗಳಿಗಾಗಿ 15 ಲಕ್ಷ ರೂ.ವರೆಗೆ ಅನುದಾನವನ್ನು ಒದಗಿಸಲಾಗುವುದು. ಇದಲ್ಲದೇ ರಾಜ್ಯಾದ್ಯಂತ 2500 ಕಾಫಿ ಕಿಯೋಸ್ಕ್ಗಳನ್ನು ತೆರೆಯಲಾಗುವುದು. ಕೇಂದ್ರ ಕಾಫಿ ಮಂಡಳಿಯ ನೆರವಿನಿಂದ ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ 25 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ
ಬೆಂಗಳೂರಿನಂತಹ ಮಹಾನಗರಗಳಲ್ಲೂ ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗದ ಅವಕಾಶಗಳನ್ನು ಸೃಜಿಸುವ ಕನಸನ್ನು ಈ ಯೋಜನೆ ಸಾಕಾರಗೊಳಿಸಿದೆ. ಅಕ್ಕ ಕೆಫೆಯಿಂದಲೇ ಸರ್ಕಾರಿ ಕಚೇರಿಗಳಿಗೆ ಆಹಾರ ಪೂರೈಕೆಯಾಗುತ್ತಿದೆ.ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ‘ಅಕ್ಕಕೆಫೆ’ಯ ತಿಂಡಿ ಹಾಗೂ ಊಟಕ್ಕೆ ಭಾರಿ ಬೇಡಿಕೆ ಬಂದಿದೆ.