ಸಮಗ್ರ ನ್ಯೂಸ್: ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಮುಡಾದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇಡಿಯ 20ಕ್ಕೂ ಹೆಚ್ಚು ಅಧಿಕಾರಿಗಳು ಕಚೇರಿಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಈ ಹಗರಣ ಸಂಬಂಧ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮ್ಸನ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಸ್ನೇಹಮಯಿ ಕೃಷ್ಣ ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೇ ಹಗರಣ ಸಂಬಂಧ 500 ಪುಟಗಳ ದಾಖಲೆಯನ್ನು ಇಡಿಗೆ ನೀಡಿದ್ದರು.
ದಾಖಲೆಗಳ ಆಧಾರದ ಮೇಲೆ ಇಡಿ ಇಸಿಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಇದೀಗ ಇಡಿ, ಮುಡಾ ಕಚೇರಿ ಮತ್ತು ಭೂ ಮಾಲೀಕ ದೇವರಾಜು ಮನೆ ಮೇಲೆ ದಾಳಿ ಮಾಡಿದೆ. ಹಗರಣದಲ್ಲಿ ದೇವರಾಜು ಎ4 ಆಗಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ದೇವರಾಜು ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಯಾವುದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮತ್ತು ಕಚೇರಿ ಮೇಲೆ ಇಡಿ ದಾಳಿ ಮಾಡುವ ಸಾಧ್ಯತೆ ಇದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಸಾಧ್ಯತೆಯೂ ಇದೆ.