ಬೆಂಗಳೂರು : ಕೋವಿಡ್ 19 ಕಣ್ಗಾವಲು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಆಗಸ್ಟ್ 30 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವದನ್ನು ತಡೆಯಲು ಕೇಂದ್ರೀಕೃತ ಕಣ್ಗಾವಲು ಕೋವಿಡ್ 19 ಸಮುಚಿತ ವರ್ತನೆಗಳನ್ನು ಕಟ್ಟು ನಿಟ್ಟಾಗಿ ಅನುರಿಸುವುದು ಹಾಗೂ ಸ್ಥಳೀಯವಾಗಿ ನಿಯಂತ್ರಿಸಲು ಆರೋಗ್ಯ ತಜ್ಞರು ಸೂಚಿಸಿದ್ದು, ಈ ಹಿನ್ನೆಲೆ ದಿನಾಂಕ ಜುಲೈ3 ರಲ್ಲಿ ಹೊರಡಿಸಲಾದ ಕಣ್ಗಾವಲು, ನಿಯಂತ್ರಣ ಮತ್ತು ಜಾಗರೂಕತೆ ಮಾರ್ಗಸೂಚಿಗಳನ್ನು ಮತ್ತು ಆ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವನ್ನು ರಾಜ್ಯಾದ್ಯಂತ ಆ. 30ರ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಇದರಂತೆ ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ಹೊರಡಿಸಿದ್ದಾರೆ. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜು. 31ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಹೊಂದಿಕೊಂಡಂತಿರುವ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಕಣ್ಗಾವಲು ಇರಿಸತಕ್ಕದ್ದು ಎಂದು ಸೂಚನೆ ನೀಡಿದ್ದಾರೆ.