ಹೈದರಾಬಾದ್: ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ ಮಹಿಳೆಯೋರ್ವರು ಮೃತ ಪತಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತೀರುವುದು ಕಂಡು ಬಂದಿದೆ.
ಪತಿಯೇ ಪರದೈವ ಎಂದು ತನ್ನ ಗಂಡನಲ್ಲಿ ದೇವರನ್ನು ಕಾಣುವ ಅನೇಕ ಮಹಿಳೆಯರಲ್ಲಿ ಇಲ್ಲೊಬ್ಬ ಮಹಿಳೆ ಎಲ್ಲರಿಗಿಂತ ಕೊಂಚ ವಿಭಿನ್ನವಾಗಿದ್ದಾಳೆ. 4 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತನ್ನ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿ ಅದರಲ್ಲಿ ಪತಿಯ ಮೂರ್ತಿ ಇಟ್ಟು ಪ್ರತಿದಿನ ಪೂಜಿಸುತ್ತಿದ್ದಾಳೆ.
ಪದ್ಮಾವತಿ ಪತಿ ಅಂಕಿರೆಡ್ಡಿಗೆ ದೇಗುಲ ನಿರ್ಮಿಸಿದ್ದಾರೆ. ತನ್ನ ತಾಯಿ ಅವರ ಪತಿಗೆ ನಮಸ್ಕರಿಸಿ, ಪೂಜೆ ಮಾಡುತ್ತಿರುವುದನ್ನು ಗಮನಿಸಿದ್ದ ಪದ್ಮಾವತಿ ಅದನ್ನು ತಮ್ಮ ಬದುಕಲ್ಲೂ ಅಳವಡಿಸಿಕೊಂಡಿದ್ದು, ಪತಿಯನ್ನು ಮರೆಯಲು ಆಗದೇ ಅವರ ಹೆಸರಿನಲ್ಲಿ ದೇಗುಲ ಕಟ್ಟಿ ಪ್ರತಿದಿನ ಪೂಜಿಸುತ್ತಿದ್ದಾರೆ.
ಅಪಘಾತದಲ್ಲಿ ಅಂಕಿರೆಡ್ಡಿ ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಪದ್ಮಾವತಿ ಅವರ ಕನಸಿನಲ್ಲಿ ಅಂಕಿರೆಡ್ಡಿ ಬಂದು ತನಗಾಗಿ ದೇವಸ್ಥಾನ ಕಟ್ಟುವಂತೆ ಹೇಳಿದ್ದನಂತೆ. ಅದಕ್ಕಾಗಿ ದೇವಸ್ಥಾನ ನಿರ್ಮಿಸಿ ಅದರಲ್ಲಿ ಅಂಕಿರೆಡ್ಡಿ ಮೂರ್ತಿ ಪ್ರತಿಷ್ಠಾಪಿಸಿ ದಿನವೂ ಪೂಜೆ ಸಲ್ಲಿಸುತ್ತಿದ್ದಾಳೆ. ನನ್ನ ಪತಿ ಬದುಕಿದ್ದಾಗಲೂ ಅವರನ್ನು ದೇವರೆಂದೇ ಭಾವಿಸಿದ್ದೆ ಎಂದು ಪದ್ಮಾವತಿ ಹೇಳುತ್ತಾರೆ.
ಅಂಕಿರೆಡ್ಡಿಯವರ ಜನ್ಮದಿನ ಸೇರಿ ಉಳಿದ ಕೆಲವು ವಿಶೇಷ ದಿನಗಳಲ್ಲಿ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯಂದು ಬಡಜನರಿಗೆ ಊಟ ಹಾಕಲಾಗುತ್ತದೆ. ಅಂಕಿರೆಡ್ಡಿ ಸ್ನೇಹಿತ ತಿರುಪತಿ ರೆಡ್ಡಿ ಅವರೊಂದಿಗೆ ಸೇರಿ, ನನ್ನ ಮಗ ಶಿವಶಂಕರ್ ರೆಡ್ಡಿ ಈ ದೇಗುಲದ ಸೇವೆಗಳನ್ನು ಮಾಡುತ್ತಿದ್ದಾನೆ ಎಂದು ಪದ್ಮಾವತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.