ಸಮಗ್ರ ನ್ಯೂಸ್: ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವಬೆದರಿಕೆ ಕೇಸ್ ನಲ್ಲಿ ಶಾಸಕ ಮುನಿರತ್ನ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು. ಇತ್ತ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನರನ್ನು ಕೋಲಾರ ಜಿಲ್ಲೆಯ ನಂಗಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತವರು ಜಿಲ್ಲೆಯಾದ ಆಂಧ್ರಪ್ರದೇಶದ ಚಿತ್ತೂರಿಗೆ ಪಲಾಯಾನ ಮಾಡುವ ವೇಳೆ ಮುನಿರತ್ನರನ್ನು ಅರೆಸ್ಟ್ ಮಾಡಲಾಗಿದೆ.
ಗುತ್ತಿಗೆದಾರ ಚೆಲುವರಾಜು ಸಿಎಂ ಸಿದ್ದರಾಮಯ್ಯಗೆ ಮನವಿ ಕೊಟ್ಟ ಒಂದೇ ಗಂಟೆಯಲ್ಲಿ ಪೊಲೀಸರು ಮುನಿರತ್ನರನ್ನು ವಶಕ್ಕೆ ಪಡೆದಿದ್ದಾರೆ. ಮುನಿರತ್ನರನ್ನು ವಶಕ್ಕೆ ಪಡೆದು ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ಕಚೇರಿಗೆ ಮುನಿರತ್ನ ಅವರನ್ನು ಕರೆತರಲಾಗುತ್ತದೆ. ಅದಾದ ಬಳಿಕ ಕೋರಮಂಗಲದ ಜಡ್ಜ್ ನಿವಾಸಕ್ಕೆ ಮುನಿರತ್ನ ಅವರನ್ನು ಹಾಜರುಪಡಿಸಲಾಗುತ್ತದೆ.
ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವಬೆದರಿಕೆ ಆರೋಪದಲ್ಲಿ ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಬೆಳಿಗ್ಗೆ ಯಿಂದ ಮುನಿರತ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಬಂಧನಕ್ಕೆ ಬಲೆ ಬೀಸಿ ಹುಡುಕಾಟ ನಡೆಸಿದಾಗ ಕೋಲಾರದಲ್ಲಿ ಸಿಕ್ಕಿದ್ದು ಇದೀಗ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.