ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯದ ವೈದಿಕ ವಿಧಿವಿಧಾನಗಳೊಂದಿಗೆ ಗುರುವಾರ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃತ ಮಹಾಭಿಷೇಕವನ್ನು ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ನೆರವೇರಿಸಿದರು.
ಅಭಿಷೇಕದ ಬಳಿಕ ಸೀತಾರಾಮ ಎಡಪಡಿತ್ತಾಯ ಅವರು ದರ್ಪಣತೀರ್ಥ ನದಿ ತೀರದಲ್ಲಿ ಭತ್ತದ ತೆನೆಗೆ ಪೂಜೆ ನೆರವೇರಿಸಿದರು. ಬಳಿಕ ತೆನೆಯನ್ನು ಮೆರವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ದೇವಳಕ್ಕೆ ಪ್ರದಕ್ಷಿಣೆ ಬಂದು ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ನಂತರ ದೇವರ ಸನ್ನಿಧಿಯಲ್ಲಿ ಕದಿರು ಪೂಜೆ ನೆರವೇರಿಸಿ ದೇವಳದ ಗರ್ಭಗುಡಿಗೆ ಕದಿರು ಕಟ್ಟಿದರು.
ಬಳಿಕ ದೇವಳದ ಪರಿವಾರ ಗುಡಿಗಳಿಗೆ, ದೇವಳದ ವಿವಿಧ ಭಾಗಗಳಿಗೆ ಕಟ್ಟಲು, ರಥಗಳಿಗೆ, ಕಚೇರಿಗೆ, ದೇವಳದ ಆಡಳಿತ ವರ್ಗಗಳಿಗೆ ತೆನೆ ವಿತರಿಸಲಾಯಿತು. ಬಳಿಕ ಭಕ್ತರಿಗೆ ಕದಿರು ವಿತರಿಸಲಾಯಿತು. ದರ್ಪಣತೀರ್ಥ ನದಿಯ ತಟದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಪ್ರಧಾನ ಅರ್ಚಕರು ಪೂಜೆ ನೆರವೇರಿಸಿದರು
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್ ಹಿರ್ತರಾ, ದೇವಳದ ಪಾಟಾಳಿ ಲೋಕೇಶ್ ಎ.ಆರ್. ಭಾಗವಹಿಸಿದ್ದರು.