ಸಮಗ್ರ ನ್ಯೂಸ್: ಖರೀದಿಸಿದ ಎಲೆಕ್ಟ್ರಿಕ್ ಬೈಕ್ ಆಗಾಗ್ಗೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೇಸತ್ತು ಗ್ರಾಹಕನೋರ್ವ ಶೋ ರೂಂಗೆ ಬೆಂಕಿ ಇಟ್ಟ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಸೆ.10ರಂದು ಕಲಬುರ್ಗಿಯ ಹುಮನಾಬಾದ್ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಬೆಂಕಿ ಬಿದ್ದಿರುವ ಪ್ರಕರಣ ನಡೆದಿತ್ತು. ಆದರೆ ಇದು ಆಕಸ್ಮಿಕವಾಗಿ ನಡೆದಂತಹ ಘಟನೆ ಎಂದು ಊಹಿಸಲಾಗಿತ್ತು. ಆದರೆ ಯಾವಾಗ ಠಾಣೆಗೆ ಗ್ರಾಹಕನೊಬ್ಬ ಬಂದು ಶರಣಾಗಿ ನಾನೇ ಬೆಂಕಿ ಹಚ್ಚಿದ್ದೇನೆ ಎಂಬ ತಪ್ಪು ಒಪ್ಪಿಕೊಂಡಾಗ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಮೊಹಮ್ಮದ್ ನದೀಮ್ ಎಂಬಾತ ಈ ಕೃತ್ಯ ಎಸಗಿದ್ದು, ಮೂರು ದಿನಗಳ ಹಿಂದಷ್ಟೇ ಹೊಸ ಎಲೆಕ್ಟ್ರಿಕ್ ಬೈಕ್ ತೆಗೆದುಕೊಂಡಿದ್ದ. ಆದರೆ, ಪ್ರಾರಂಭದಿಂದಲೂ ಬೈಕ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಎರಡು ಬಾರಿ ದುರಸ್ತಿ ಮಾಡಿದರೂ ಸರಿಹೋಗಿರಲಿಲ್ಲ. ಹೀಗಾಗಿ ಶೋರೂಂಗೆ ಬಂದಿದ್ದ ವ್ಯಕ್ತಿ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದ. ಬಳಿಕ ಕೋಪಗೊಂಡು ಪೆಟ್ರೋಲ್ ತೆಗೆದುಕೊಂಡು ಬಂದು ಶೋರೂಂನಲ್ಲಿದ್ದ ಬೈಕ್ಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.
ಹುಮನಾಬಾದ್ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಗ್ರಾಹಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ತಪ್ಪು ಒಪ್ಪಿಕೊಂಡಿದ್ದಾನೆ. ಕಲಬುರಗಿ ನಗರದ ನಿವಾಸಿ ಮಹ್ಮದ್ ನದೀಮ್ ಬೆಂಕಿ ಹಚ್ಚಿದ ಗ್ರಾಹಕನಾಗಿದ್ದು, ಚೌಕ್ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.