ಸಮಗ್ರ ನ್ಯೂಸ್: ಸಮುದ್ರ ಪಾಲಾಗುತ್ತಿದ್ದ ಯುವಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಕಾಪು ತಾಲೂಕಿನ ಕಡಲ ತೀರದಲ್ಲಿ ನಡೆದಿದೆ.
ಕಾಪು ಪಡುಗ್ರಾಮದ ನಿವಾಸಿ ಸಚಿನ್(31) ರಕ್ಷಿಸಲ್ಪಟ್ಟ ಯುವಕ. ಸಾಂಪ್ರದಾಯಿಕ ಮೀನುಗಾರಿಕೆಗಾಗಿ ಬಲೆ ಇಡಲೆಂದು ಬಲೆಯೊಂದಿಗೆ ತೆರಳಿದ್ದ ಸಚಿನ್ ಸಮುದ್ರದಲ್ಲಿ ಮುಳುಗಿ, ಸಮುದ್ರ ಪಾಲಾಗುವ ಭೀತಿಯಲ್ಲಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಬೊಬ್ಬೆ ಹಾಕಿದರು. ಈ ವೇಳೆ ಮೀನುಗಾರರಾದ ಶರ್ಮಾ, ಹರೀಶ್ ಕರ್ಕೇರ ಅವರು ಸಮುದ್ರಕ್ಕೆ ಇಳಿದು ಜೀವದ ಹಂಗು ತೊರೆದು ಯುವಕನನ್ನು ರಕ್ಷಿಸಿದ್ದಾರೆ.
ಯುವಕನನ್ನು ರಕ್ಷಿಸಿ ಮೇಲಕ್ಕೆ ಕರೆತರುವಾಗ ರಕ್ಷಣಾ ದೋಣಿ ಕೂಡಾ ಮಗುಚಿ ಬಿದ್ದಿದ್ದು, ಈ ವೇಳೆ ಕಾಪು ಬೀಚ್ ನಲ್ಲಿರುವ ಲೈಫ್ ಗಾರ್ಡ್ ಗಳು ಅವರ ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯ ಮೀನುಗಾರರಾದ ಬಾಲಕೃಷ್ಣ, ಲೋಕೇಶ್, ಶಿವಾಜಿ ಹಾಗೂ ಕರಾವಳಿ ಕಾವಲು ಪಡೆ ರಕ್ಷಕರು ಸಹಕಾರದೊಂದಿಗೆ ಮೇಲಕ್ಕೆ ಕರೆತಂದು ಯುವಕನ ಪ್ರಾಣ ರಕ್ಷಣೆಗೆ ನೆರವಾಗಿದ್ದಾರೆ.