ಸಮಗ್ರ ನ್ಯೂಸ್: ಸುಮಾರು 14 ತಿಂಗಳ ಹಿಂದೆ ಅಪಹರಣಗೊಂಡ ಪೃಥ್ವಿ ಎಂಬ ಪುಟಾಣಿ ಅಪಹರಿಸಿದವನನ್ನು ಬಿಟ್ಟು ಬರಲು ನಿರಾಕರಿಸಿ ರಚ್ಚೆ ಹಿಡಿದ ವಿಚಿತ್ರ ಘಟನೆ ಸಂಗನೇರ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
14 ತಿಂಗಳ ಹಿಂದೆ ನಡೆದಿದ್ದ 11 ತಿಂಗಳ ಪೃಥ್ವಿ ಹೆಸರಿನ ಮಗುವಿನ ಅಪಹರಣ ಪ್ರಕರಣವನ್ನು ಪೊಲೀಸರು ಈಗ ಭೇದಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಆದರೆ ಮಗುವನ್ನು ಪಡೆಯುವ ವೇಳೆ ಅಪಹರಣಕಾರ ತನುಜ್ ಚಾಹರ್‌ನಿಂದ ಮಗುವನ್ನು ಬೇರ್ಪಡಿಸಲು ಮುಂದಾದ ಸಮಯದಲ್ಲಿ ಮಗು ಆತನನ್ನು ಬಿಗಿಯಾಗಿ ಅಪ್ಪಿಕೊಂಟು ಅಳಲು ಪ್ರಾರಂಭಿಸಿದೆ. ಈ ಮನಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಗುವನ್ನು ತನುಜ್‌ನಿಂದ ಬೇರ್ಪಡಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಮಗು ಆ ವ್ಯಕ್ತಿಯನ್ನು ಬಿಗಿಯಾಗಿ ತಬ್ಬಿಕೊಂಡು ಜೋರಾಗಿ ಅಳುತ್ತದೆ. ಮಗು ಅಳುತ್ತಿರುವುದನ್ನು ಕಂಡು ಆರೋಪಿಯೂ ಭಾವುಕನಾಗಿ ಕಣ್ಣೀರಿಟ್ಟಿದ್ದಾನೆ.
ಕೆಲ ಹೊತ್ತಿನ ಶ್ರಮದ ನಂತರ ಪೊಲೀಸ್ ಅಧಿಕಾರಿಯೊಬ್ಬರು ಬಲವಂತವಾಗಿ ಮಗುವನ್ನು ಆರೋಪಿಯಿಂದ ಬೇರ್ಪಡಿಸಿ ತಾಯಿಗೆ ಒಪ್ಪಿಸಿದ್ದಾರೆ.
ಆರೋಪಿ ತನುಜ್ ಚಾಹರ್ ಯಮುನಾ ನದಿಯ ಬಳಿಯ ಖಾದರ್ ಪ್ರದೇಶದ ಗುಡಿಸಲಿನಲ್ಲಿ ವಾಸವಾಗಿದ್ದು, ತನ್ನ ಗುರುತನ್ನು ಮರೆಮಾಚಲು ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟು ಸನ್ಯಾಸಿಯಂತೆ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನುಜ್ ಚಾಹರ್ ಉತ್ತರ ಪ್ರದೇಶದ ಆಗ್ರಾದವನು. ಆತ ಅಲಿಗಢ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಆತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ತನುಜ್ ಈ ಹಿಂದೆ ಯುಪಿ ಪೊಲೀಸರ ವಿಶೇಷ ತಂಡ ಮತ್ತು ಕಣ್ಗಾವಲು ತಂಡದ ಭಾಗವಾಗಿ ಕೆಲಸ ನಿರ್ವಹಿಸಿದ್ದ.