ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕನಕಮಜಲು ಮೂಲದ ಮಹಿಳೆ ಐಶ್ವರ್ಯ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೆ ಶರಣಾಗಿದ್ದ ಪ್ರಕರಣಕ್ಕೆ ಮರುಜೀವ ನೀಡಲಾಗಿದ್ದು ನೂತನ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಪರ ಹೈಕೋರ್ಟ್‌ಗೆ ಹಿರಿಯ ವಕೀಲ ಶ್ಯಾಮ್ ಸುಂದರ್ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಜ್ಯ ಸರ್ಕಾರ ನೇಮಿಸಿದೆ.
2023ರ ಅಕ್ಟೋಬರ್ 26ರಂದು ಸುಳ್ಯ ಮೂಲದ ಐಶ್ವರ್ಯ ಗೋವಿಂದರಾಜ ನಗರದ ತಮ್ಮ ತಂದೆಯ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆ ಕಿರುಕುಳ ಆರೋಪದಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಕಾರಣರೆಂದು ಅತ್ತೆ, ಮಾವ, ಸೋದರತ್ತೆ, ಸೋದರ ಮಾವ ಸೇರಿ ಒಂಬತ್ತು ಜನರ ಹೆಸರನ್ನು ಐಶ್ವರ್ಯ ಬರೆದಿಟ್ಟಿದ್ದರು. ಚಾರಿತ್ರ್ಯವಧೆ ಮಾಡಿ ಕಿರುಕುಳ ನೀಡಿದ್ದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರು. ಆದ್ರೆ ಪ್ರಕರಣಕ್ಕೆ ಹೈಕೋರ್ಟಿನಲ್ಲಿ ತಡೆ ನೀಡಲಾಗಿತ್ತು.
ಪ್ರಕರಣದ ಹಿನ್ನೆಲೆ:
ಐಶ್ವರ್ಯ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನು ಕುಟುಂಬಸ್ಥರ ನಿಶ್ಚಯದಂತೆ ಐಶ್ವರ್ಯ ಮದುವೆಯಾಗಿದ್ದಳು. ಅಮೆರಿಕದಲ್ಲಿ ಎಂಎಸ್ ಮಾಡಿದ್ದ ಪ್ರತಿಭಾವಂತೆಯಾಗಿದ್ದ ಐಶ್ವರ್ಯ, ಪ್ರಸಿದ್ಧ ಡೈರಿ ರಿಚ್ ಐಸ್‌ಕ್ರೀಮ್ ಕಂಪನಿ ಮಾಲೀಕರಾದ ರಾಜೇಶ್ ಕುಟುಂಬ ಸೇರಿದ್ದಳು.
ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡನಾದ ರವೀಂದ್ರ ಎಂಬಾತ ಇದೇ ಕಂಪನಿಯಲ್ಲಿ ಆಡಿಟರ್ ಆಗಿದ್ದು, ಆತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಕೆಲಕಾಲ ನಂತರ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬಕ್ಕೆ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದರು.
ಐಶ್ವರ್ಯ ಕುರಿತು ಕೆಟ್ಟದಾಗಿ ರಾಜೇಶ್ ಕುಟುಂಬಕ್ಕೆ ಹೇಳುತ್ತಿದ್ದ ರವೀಂದ್ರ ಮತ್ತು ಕುಟುಂಬ, ಐಶ್ವರ್ಯಳ ಹಳೆಯ ಪೋಟೋಗಳನ್ನು ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರು. ಇದರಿಂದಾಗಿ ರಾಜೇಶ್ ಕುಟುಂಬ ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿತ್ತು. ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ, ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿಯಿಂದ ಕಿರುಕುಳವಿತ್ತು. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಮಾವ ಗಿರಿಯಪ್ಪ, ಅತ್ತೆ ಸೀತಮ್ಮ, ಪತಿ ರಾಜೇಶ್, ನಾದಿನಿ ತಸ್ಮೇ, ಸೋದರತ್ತೆ ಗೀತಾ, ಸೋದರ ಮಾವ ರವೀಂದ್ರನಾಥ್, ಸೋದರ ಅತ್ತೆ ಮಗಳು ಲಿಪಿ, ಚಿಕ್ಕಮ್ಮ ಶಾಲಿನಿ ಓಂಪ್ರಕಾಶ್, ಚಿಕ್ಕಪ್ಪ ಓಂಪ್ರಕಾಶ್ ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಒಂಬತ್ತು ಆರೋಪಿಗಳು ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದಲ್ಲದೇ ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದರು. ಇದೀಗ ಹೈಕೋರ್ಟಲ್ಲಿ ಈ ಕೇಸನ್ನು ಮುನ್ನಡೆಸಲು ಹಿರಿ ವಕೀಲರಾದ ಶ್ಯಾಮಸುಂದರ್ ರವರನ್ನು ಸರಕಾರ ನೇಮಿಸಿರುವುದರಿಂದ ಪ್ರಕರಣದ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.