ಬೆಂಗಳೂರು: ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಪೋಟಗೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ನಂತರ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಆನಂದ್ ಸಿಂಗ್ ಅವರು ತಮ್ಮ ಕ್ಷೇತ್ರದಲ್ಲಿದ್ದ ಶಾಸಕರ ಕಚೇರಿ ತೆರವುಗೊಳಿಸಿದ್ದಾರೆ.
ಪ್ರಭಾವಿ ಖಾತೆ ಪಡೆಯಲು ಒತ್ತಡ ತಂತ್ರ ಅನುಸರಿಸಿದ್ದು, ರಾಜೀನಾಮೆ ಕೊಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಸಚಿವಗಿರಿ ಮಾತ್ರವಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿರುವ ಆನಂದ್ ಸಿಂಗ್ ಬಿಜೆಪಿ ಬಣಕ್ಕೆ ತಲೆನೋವಾಗಿ ಪರಿಣಮಿಸಿದೆ.
ತಮಗೆ ಇಷ್ಟವಾದ ಖಾತೆ ಕೊಡದಿದ್ದರೆ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇದರೊಂದಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಆಪ್ತರ ಬಳಿ ಹೇಳಿದ್ದಾರೆನ್ನಲಾಗಿದೆ.
ಖಾತೆ ಬದಲಾವಣೆಗಾಗಿ ಸಿಎಂ ಭೇಟಿಯಾಗಿದ್ದ ಆನಂದ್ ಸಿಂಗ್ ಕೇಳಿದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುತ್ತಿರುವ ಘಟನೆಗಳು ನಡೆಯುತ್ತಿದ್ದು, ಸಚಿವ ಆನಂದ್ ಸಿಂಗ್ ತಮ್ಮ ವಿಧಾನಸೌಧದ ಕಚೇರಿಗೂ ಇದುವರೆಗೆ ಭೇಟಿ ನೀಡಿಲ್ಲ. ಅಲ್ಲದೇ ವಿಜಯನಗರ ಶಾಸಕರ ಕಚೇರಿಯನ್ನು ಸಹ ಆನಂದ್ ಸಿಂಗ್ ಖಾಲಿ ಮಾಡಿದ್ದು, ಇಲ್ಲಿ ಶಾಸಕರು ಲಭ್ಯವಿಲ್ಲ ಎಂದು ಬೋರ್ಡ್ ಸಹ ಹಾಕಿದ್ದಾರೆ.
ಸಿಎಂಗೆ ರಾಜೀನಾಮೆ ಪತ್ರ?
ಮೊನ್ನೇ ಕುಟುಂಬ ಸಮೇತರಾಗಿ ಬಂದು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಸದ್ಯಕ್ಕೆ ಆಗೋಲ್ಲ. ಈ ಖಾತೆಯನ್ನೇ ನಿಭಾಯಿಸಿ. ಮುಂದೆ ನೋಡೋಣ. ಈಗ ನಿಮ್ಮ ಖಾತೆ ಬದಲಿಸಿದ್ರೆ ಇನ್ನುಳಿದವರೂ ಸಹ ತಮ್ಮ ಖಾತೆ ಬದಲಾವಣೆ ಮಾಡುವಂತೆ ಬರುತ್ತಾರೆ. ಹಾಗಾಗಿ ಈಗ ಖಾತೆ ಬದಲಾವಣೆ ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಸಿಎಂ ಹೇಳಿದ್ದಾರೆ. ಬೊಮ್ಮಾಯಿ ಮಾತಿನಿಂದ ಬೇಸರಗೊಂಡ ಆನಂದ್ ಸಿಂಗ್ ಕವರ್‌ನಲ್ಲಿ ರಾಜೀನಾಮೆ ಪತ್ರ ನೀಡಿ ಬಂದಿದ್ದಾರೆ ಎನ್ನಲಾಗಿದೆ.
ಈ ಕುರಿತು ಈ ಹಿಂದೆಯೇ ಹೇಳಿಕೆ ನೀಡಿದ್ದ ಸಿಂಗ್ ಪ್ರವಾಸೋದ್ಯಮ ಖಾತೆ ಬದಲು ಬೇರೆ ಖಾತೆ ನೀಡಿ, ಇಲ್ಲವಾದರೆ ಶಾಸಕನಾಗಿಯೇ ಇರುತ್ತೇನೆ ಎಂದಿದ್ದರು. ಒಟ್ಟಾರೆ ಸಿಂಗ್ ರ ಈ ನಡೆ ಸಿಎಂ ಆನಂದ ಕಿತ್ತುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.
ಇದನ್ನೂ ಓದಿರಿ
ಸಂಜಿರ ಮಾಡುವ ಬಗ್ಗೆ ತಿಳಿದುಕೊಳ್ಳಿ