ಸಮಗ್ರ ನ್ಯೂಸ್: ಮಡಿಕೇರಿಯ ಭಾಗಮಂಡಲದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಆ.15 ರಂದು ನಡೆದಿದೆ.
ಈ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಓರ್ವ ಆರೋಪಿಯನ್ನು ಮತ್ತು ಈತನಿಂದ ಅಕ್ರಮ ನಾಡ ಬಂದೂಕುಗಳನ್ನು ಖರೀದಿಸಿದ ಮೂವರನ್ನು ಬಂಧಿಸಿದ್ದಾರೆ.
ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮಹೇಶ್ ಕುಮಾರ್, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಅನೂಪ್ ಮಾದಪ್ಪ, ಸಿಪಿಐ, ಮಡಿಕೇರಿ ಗ್ರಾಮಾಂತರ ವೃತ್ತ, ಹಾಗೂ ಶೋಭಾ ಲಾಮಾಣಿ, ಪಿಎಸ್‌ಐ, ಭಾಗಮಂಡಲ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಇಡುಕ್ಕಿ ಜಿಲ್ಲೆ ಮೂಲದ ಸುರೇಶ್ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ, ಅಕ್ರಮವಾಗಿ ನಾಡ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು ಮತ್ತು 02 – ನಾಡ ಬಂದೂಕು (ಎಸ್.ಬಿ.ಬಿ.ಎಲ್) ಹಾಗೂ 01 ನಾಡ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕಲಂ: 3, 25 Indian Arms Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.