ಸಮಗ್ರ ನ್ಯೂಸ್: ಅರಣ್ಯ ಇಲಾಖೆಗೆ ಸಂಬಂಧಿಸಿದ ಒತ್ತುವರಿ ಜಮೀನು ತೆರವು ಕಾರ್ಯಾಚರಣೆ ವೇಗ ಪಡೆದುಕೊಂಡಿದ್ದು, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುತ್ತಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಮತ್ತಾವರ ಮೀಸಲು ಅರಣ್ಯದಲ್ಲಿ ಒತ್ತುವರಿ ಮಾಡಿ ಕಾಫಿ ತೋಟ ಮಾಡಿದ್ದ 20 ಎಕರೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.
ವಸ್ತಾರೆ ಗ್ರಾಮದ ಸರ್ವೆ ನಂಬರ್ 369ರಲ್ಲಿ ಹಲವರು ಒತ್ತುವರಿ ಮಾಡಿ ಕಾಫಿ ಗಿಡಗಳನ್ನು ನೆಟ್ಟಿದ್ದರು. ಅರಣ್ಯ ಜಾಗದಲ್ಲಿದ್ದ ಕಾಫಿ ಗಿಡಗಳನ್ನು ಕತ್ತರಿಸಿ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಕೊಪ್ಪ ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿ ಗುರುತಿಸಿ ಮಾರ್ಕ್ ಮಾಡಲಾಗಿದ್ದು, ಭಾನುವಾರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದರು.
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 5,551 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದ್ದು, ಸಚಿವ ಈಶ್ವರ್ ಖಂಡ್ರೆ ಸೂಚನೆ ಮೇರೆಗೆ ಈಗ ತೆರವು ಕಾರ್ಯ ಶುರು ಮಾಡಲಾಗಿದೆ.
ವಯನಾಡು ಘಟನೆಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ರಾಜ್ಯದಲ್ಲಿ ಅರಣ್ಯ ಒತ್ತುವರಿ, ಅಕ್ರಮ ತೋಟಗಳು ಹಾಗೂ ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅದರಂತೆ 2015ರ ನಂತರದ ಪ್ರಕರಣಗಳನ್ನು ಗುರುತಿಸಿ ಅರಣ್ಯ ಒತ್ತುವರಿ ತೆರವುಗೊಳಿಸಲಾಗುತ್ತಿದ್ದು, ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸಾಕಷ್ಟು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ತೀರಾ ಕಡಿಮೆಯಿವೆ. ಬಹುತೇಕ ಪ್ರಕರಣಗಳು ಕಾಫಿ ತೋಟ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದಾಗಿದೆ. ಅದರಲ್ಲಿಯೂ ಸಣ್ಣ ಪ್ರಮಾಣದ ಒತ್ತುವರಿ ಪ್ರಕರಣಗಳೇ ಹೆಚ್ಚಿದ್ದು, ಇಂತಹ ಪ್ರಕರಣಗಳ ಒತ್ತುವರಿ ತೆರವು ಕಾರ್ಯ ಶುರುವಾಗಿದೆ.